ಅ.3-4ರಂದು ಅಲ್ಪಸಂಖ್ಯಾತರು, ಎಸ್ಸಿ, ಎಸ್ಟಿ, ಒಬಿಸಿ ವಿಭಾಗದ ಕಾರ್ಯಾಗಾರ: ಎಚ್.ಡಿ.ಕುಮಾರಸ್ವಾಮಿ

ಬೆಂಗಳೂರು, ಸೆ.29: ಮುಂದಿನ ತಿಂಗಳು ಅಕ್ಟೋಬರ್ 3 ಮತ್ತು 4ರಂದು ಎರಡು ದಿನಗಳ ಕಾಲ ಜನತಾ ಪರ್ವ 1.0 ಹಾಗೂ ಮಿಷನ್ 123 ಎರಡನೆ ಹಂತದ ಕಾರ್ಯಾಗಾರ ನಡೆಯಲಿದೆ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.
ಅ.3ರಂದು ಬೆಳಗ್ಗೆ 9 ಗಂಟೆಗೆ ಜೆಡಿಎಸ್ ಅಲ್ಪಸಂಖ್ಯಾತರ ವಿಭಾಗದ ಪ್ರತಿನಿಧಿಗಳ ಕಾರ್ಯಾಗಾರ ಹಾಗೂ ಅ.4ರಂದು ಅದೇ ನಿಗದಿತ ಸಮಯದಿಂದ ಎಸ್ಸಿ, ಎಸ್ಟಿ ಹಾಗೂ ಒಬಿಸಿ ವಿಭಾಗದ ಪ್ರತಿನಿಧಿಗಳ ಕಾರ್ಯಾಗಾರ ಇರುತ್ತದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಸೆ.27ರಿಂದ 30ರ ವರೆಗೆ ನಡೆಯುತ್ತಿರುವ ಈ ಕಾರ್ಯಾಗಾರದಂತೆ ಅಲ್ಪಸಂಖ್ಯಾತರ ಮತ್ತು ಎಸ್ಸಿ, ಎಸ್ಟಿ ಹಾಗೂ ಒಬಿಸಿ ವಿಭಾಗದ ಕಾರ್ಯಾಗಾರವೂ ನಡೆಯುತ್ತಿದೆ. ಮುಂದಿನ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ ನಿಗದಿ ಮಾಡುವುದು ಹಾಗೂ ಅದಕ್ಕೆ ಬೇಕಾದ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳುವ ಬಗ್ಗೆ ಟಾಸ್ಕ್‍ಗಳನ್ನು ಕೊಡಲಾಗುವುದು ಎಂದು ಅವರು ತಿಳಿಸಿದ್ದಾರೆ.
ಈ ಸಮುದಾಯಗಳಿಗೆ ವಿಶ್ವಾಸ ತುಂಬುವುದು ಸೇರಿ ಚುನಾವಣೆಗೆ ಸಜ್ಜುಗೊಳಿಸುವುದು ಈ ಕಾರ್ಯಾಗಾರದ ಉದ್ದೇಶ. ಈ ವಿಭಾಗಕ್ಕೆ ಸೇರಿದ ಎಲ್ಲ ಮುಖಂಡರು ಭಾಗಿಯಾಗಲಿದ್ದಾರೆ ಎಂದು ಕುಮಾರಸ್ವಾಮಿ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.





