ಗಡಿನಾಡಿನಲ್ಲಿ ಸಂಭ್ರಮದ ಕನ್ನಡ ಜಾಗೃತಿ ಉತ್ಸವ: ಶಾಸಕ ಸೋಮಶೇಖರ್ ರೆಡ್ಡಿ
''ಗಡಿಪ್ರದೇಶಾಭಿವೃದ್ಧಿ ಪ್ರಾಧಿಕಾರಕ್ಕೆ ಹೆಚ್ಚಿನ ಅನುದಾನಕ್ಕೆ ಪ್ರಯತ್ನ''

ಬಳ್ಳಾರಿ, ಸೆ.29: ರಾಜ್ಯದ ಗಡಿಭಾಗದಲ್ಲಿನ ಕನ್ನಡಿಗರ ಸಾಮಾಜಿಕ, ಶೈಕ್ಷಣಿಕ ಹಾಗೂ ಸಾಂಸ್ಕøತಿಕ ಅಗತ್ಯತೆಗಳನ್ನು ಪೂರೈಸುವ ಮತ್ತು ಕನ್ನಡಿಗರ ಹಿತಾಸಕ್ತಿ ಕಾಪಾಡುವುದರ ಜೊತೆಗೆ ನೆರೆ ರಾಜ್ಯಗಳ ಕನ್ನಡಿಗರ ಸಮಗ್ರ ಹಿತಾಸಕ್ತಿ ಸುಧಾರಿಸುವಲ್ಲಿ ನಿರತರಾಗಿರುವ ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರಕ್ಕೆ ಹೆಚ್ಚಿನ ಅನುದಾನ ಒದಗಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಜೊತೆ ಚರ್ಚಿಸಲಾಗುವುದು ಎಂದು ಬಳ್ಳಾರಿ ನಗರ ಶಾಸಕ ಜಿ.ಸೋಮಶೇಖರ್ ರೆಡ್ಡಿ ಹೇಳಿದರು.
ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರ ಹಾಗೂ ಬಳ್ಳಾರಿ ಜಿಲ್ಲಾಡಳಿತದ ಸಹಯೋಗದಲ್ಲಿ ಭಾರತ ಸ್ವಾತಂತ್ರೋತ್ಸವ ಅಮೃತ ಮಹೋತ್ಸವದ ಅಂಗವಾಗಿ ನಗರದ ಡಾ.ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಏರ್ಪಡಿಸಿದ್ದ ಗಡಿನಾಡಿನಲ್ಲಿ ಕನ್ನಡ ಜಾಗೃತಿ ಸಾಂಸ್ಕೃತಿಕ ಉತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಈ ಪ್ರಾಧಿಕಾರಕ್ಕೆ ಹೆಚ್ಚಿನ ಅನುದಾನ ನೀಡಿದಲ್ಲಿ ಗಡಿಭಾಗದಲ್ಲಿ ಕನ್ನಡ ಸಂಸ್ಕೃತಿ, ಕನ್ನಡ ಅಸ್ಮಿತೆ ಮತ್ತು ಕನ್ನಡ ಸೊಗಡು ಹಾಗೂ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಪರಿಣಾಮಕಾರಿಯಾದಂತ ಕ್ರಮಗಳನ್ನು ಕೈಗೊಳ್ಳಲು ಅನುಕೂಲವಾಗುತ್ತದೆ. ಇದಕ್ಕಾಗಿ ಮುಖ್ಯಮಂತ್ರಿಗಳಲ್ಲಿ ಕಾಡಿಬೇಡಿಯಾದರೂ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರಕ್ಕೆ ಹೆಚ್ಚಿನ ಅನುದಾನ ಒದಗಿಸಿಕೊಡುವುದಕ್ಕೆ ಪ್ರಯತ್ನಿಸಲಾಗುವುದು ಎಂದು ಅವರು ಹೇಳಿದರು.
ಗಡಿಭಾಗದಲ್ಲಿ ಕುಂದುತ್ತಿರುವ ನಮ್ಮ ಕನ್ನಡ ಭಾಷೆ, ಕಲೆ, ಸಂಸ್ಕøತಿಯ ಬೆಳವಣಿಗೆ ಅತ್ಯಂತ ಅಗತ್ಯವಿದೆ ಎಂಬ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ ಸೋಮಶೇಖರರೆಡ್ಡಿ, ಈ ಪ್ರಾಧಿಕಾರವು ಅಧ್ಯಕ್ಷ ಸೋಮಶೇಖರ ನೇತೃತ್ವದಲ್ಲಿ ಅತ್ಯಂತ ಉತ್ತಮವಾದ ಕೆಲಸ ಮಾಡುತ್ತಿದೆ. ಅವರನ್ನು ಶಾಶ್ವತವಾಗಿ ಈ ಪ್ರಾಧಿಕಾರಕ್ಕೆ ಮುಂದುವರಿಸಿದಲ್ಲಿ ಗಡಿಪ್ರದೇಶದ ಕನ್ನಡಿಗರ ಹಾಗೂ ಕನ್ನಡ ಭಾಷೆ ಹಿತಾಸಕ್ತಿ ದೃಷ್ಟಿಯಿಂದ ಒಳ್ಳೆಯದು ಎಂದರು.
ವಿಧಾನಪರಿಷತ್ ಸದಸ್ಯ ಅಲ್ಲಂ ವೀರಭದ್ರಪ್ಪ ಮಾತನಾಡಿ, ಗಡಿಪ್ರದೇಶದಲ್ಲಿ ಕನ್ನಡ ಭಾಷೆ ಉಳಿವಿಗಾಗಿ ಸಂಗನಬಸವ ಸ್ವಾಮೀಜಿ ಅವರು ಶಾಲೆಯೊಂದನ್ನ ಪ್ರಾರಂಭಿಸಿ ನಡೆಸುತ್ತಿದ್ದಾರೆ. ಉಚಿತ ಶಿಕ್ಷಣ ಜೊತೆಗೆ ದಾಸೋಹವೂ ನಡೆಸುತ್ತಿರುವುದು ಹೆಮ್ಮೆಯ ವಿಷಯ. ಗಡಿನಾಡಿನ ಪ್ರದೇಶಗಳಲ್ಲಿ ಕನ್ನಡ ಸಂಸ್ಕೃತಿ, ಕನ್ನಡ ಅಸ್ಮಿತೆ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಎಲ್ಲರೂ ಪ್ರಯತ್ನಿಸೋಣ ಎಂದರು.
ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಸಿ.ಸೋಮಶೇಖರ್ ಮಾತನಾಡಿ, ಕರ್ನಾಟಕ ಗಡಿಪ್ರದೇಶಾಭಿವೃದ್ಧಿ ಪ್ರಾಧಿಕಾರವು ಗಡಿಭಾಗದ ಸಾಂಸ್ಕøತಿಕ, ಸಾಮಾಜಿಕ, ಸಾಹಿತ್ಯಿಕ ಮತ್ತು ಆರ್ಥಿಕ ಸ್ಥಿತಿಗತೆ ಸೇರಿದಂತೆ ಸಮಗ್ರ ಅಧ್ಯಯನ ನಡೆಸಲು ಮುಂದಾಗಿದ್ದು, ಇದರ ಜವಾಬ್ದಾರಿಯನ್ನು ಕನ್ನಡ ವಿವಿಗೆ ವಹಿಸಲಾಗಿದೆ.ಇದರ ವರದಿ ಬಂದ ನಂತರ ಗಡಿ ಪ್ರದೇಶದ ಅಭಿವೃದ್ಧಿಗೆ ಸಮಗ್ರ ನೀತಿ ರೂಪಿಸಲಾಗುವುದು ಎಂದರು.
ಪ್ರಾಧಿಕಾರದಿಂದ ಕಯ್ಯಾರ್ ಕಿಯ್ಞಣ್ಣ ರೈ, ಜಯದೇವಿ ತಾಯಿ ಲಿಗಾಡೆ ಹೆಸರಿನಲ್ಲಿ ರಾಜ್ಯಪ್ರಶಸ್ತಿ ನೀಡಲು ಉದ್ದೇಶಿಸಲಾಗಿದೆ ಎಂದು ಡಾ.ಸಿ.ಸೋಮಶೇಖರ್ ತಿಳಿಸಿದರು. ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಪಿ.ಎಸ್.ಮಂಜುನಾಥ್, ಮಹಾನಗರ ಪಾಲಿಕೆ ಸದಸ್ಯರಾದ ಪಿ.ಗಾದೆಪ್ಪ್ಪ, ಶ್ರೀನಿವಾಸ್ ಮೋತ್ಕರ್, ರಾಬಕೋ ಹಾಲು ಒಕ್ಕೂಟದ ನಿರ್ದೇಶಕ ವೀರಶೇಖರರೆಡ್ಡಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ನಿವೃತ್ತ ಉಪನಿರ್ದೇಶಕ ಚೋರನೂರು ಕೊಟ್ರಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.







