ರಾ.ಹೆದ್ದಾರಿ ಸುಗಮ, ಸುರಕ್ಷಿತ ಸಂಚಾರಕ್ಕೆ ಯೋಗ್ಯವಾಗಿರಲಿ: ಉಡುಪಿ ಜಿಲ್ಲಾಧಿಕಾರಿ

ಉಡುಪಿ, ಸೆ.29: ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿಗಳು ಜನ ಸಾಮಾನ್ಯರ ಸುಗಮ ಹಾಗೂ ಸುರಕ್ಷಿತ ಸಂಚಾರಕ್ಕೆ ಅನುಕೂಲವಾಗುವ ರೀತಿಯಲ್ಲಿ ಕಾಮಗಾರಿಗಳನ್ನು ಶೀಘ್ರದಲ್ಲಿಯೇ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಎಂ.ಕೂರ್ಮಾ ರಾವ್ ತಿಳಿಸಿದ್ದಾರೆ.
ಬುಧವಾರ ಸಂಜೆ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ರಾಷ್ಟ್ರೀಯ ಹೆದ್ದಾರಿ 66 ಮತ್ತು 169ಎ ಗೆ ಸಂಬಂಧಿಸಿದ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.
ಜಿಲ್ಲೆಯಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಗಳಲ್ಲಿ ವಾಹನಗಳು ಹಾಗೂ ಜನಸಾಮಾನ್ಯರ ಸುರಕ್ಷಿತ ಹಾಗೂ ಸುಗಮವಾಗಿ ಸಂಚಾರಕ್ಕೆ ಅಗತ್ಯ ವಿರುವ ಎಲ್ಲಾ ರೀತಿಯ ಮೂಲಭೂತ ಸೌಕರ್ಯಗಳನ್ನು ಒಳಗೊಂಡ ರಸ್ತೆ ಕಾಮಗಾರಿಗಳನ್ನು ಕೈಗೊಂಡಾಗ ಮಾತ್ರ ಅಪಘಾತ ಮುಕ್ತವಾಗುವುದರ ಜೊತೆಗೆ ಜನರು ಯಾವುದೇ ತೊಂದರೆ ಇಲ್ಲದೆ ಸಂಚರಿಸಬಹುದು. ಇದಕ್ಕೆ ಒತ್ತು ನೀಡಬೇಕು ಎಂದರು.
ರಾಷ್ಟ್ರೀಯ ಹೆದ್ದಾರಿ-66ರ ಕುಂದಾಪುರದ ಸಂಗಂ ಬಳಿ ಮಳೆಯ ನೀರು ನಿಂತು ವಾಹನ ಸಂಚಾರಕ್ಕೆ ತೊಂದರೆ ಉಂಟಾಗುತ್ತಿದೆ. ನೀರು ಸರಾಗವಾಗಿ ಹರಿದು ಹೋಗುವ ವ್ಯವಸ್ಥೆಯನ್ನು ಸ್ಥಳೀಯ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ಸಮನ್ವಯದೊಂದಿಗೆ ನಡೆಸುವಂತೆ ಅವರು ಸೂಚನೆ ನೀಡಿದರು.
ಕುಂದಾಪುರದ ಫ್ಲೈಓವರ್ ಹತ್ತಿರ ಬಾಕಿ ಉಳಿದಿರುವ ರಸ್ತೆಯ ಡಾಂಬರೀ ಕರಣ, ಮಳೆಯ ನೀರು ಸರಾಗವಾಗಿ ಹರಿದುಹೋಗುವ ವ್ಯವಸ್ಥೆ, ಬೀದಿದೀಪ, ಸೂಚನಾ ಫಲಕಗಳ ಅಳವಡಿಕೆ, ಪಾದಚಾರಿಗಳು ರಸ್ತೆ ದಾಟಲು ಅನುಕೂಲ ವಾಗುವ ದಾರಿ ಸೇರಿದಂತೆ ಎಲ್ಲಾ ಕಾಮಗಾರಿಯನ್ನು ಆದ್ಯತೆಯ ಮೇರೆಗೆ ಕೈಗೊಂಡು ಪೂರ್ಣಗೊಳಿಸುವಂತೆ ಅವರು ಸಂಬಂಧಿತರಿಗೆ ಸೂಚಿಸಿದರು.
ಹೆದ್ದಾರಿಗಳ ಕಾಮಗಾರಿಗಳನ್ನು ಕೈಗೊಳ್ಳಲು ಜಿಲ್ಲಾಡಳಿತ ಅಗತ್ಯವಿರುವ ಎಲ್ಲಾ ರೀತಿಯ ಸಹಕಾರವನ್ನು ನೀಡಲಿದೆ ಎಂದ ಅವರು, ಕೇಂದ್ರ ಹಾಗೂ ರಾಜ್ಯ ಸರಕಾರಗಳಿಂದ ಯಾವುದೇ ರೀತಿಯ ನೆರವು ಬೇಕಿದ್ದರೆ ಸಚಿವರ ಮೂಲಕ ಶೀಘ್ರದಲ್ಲಿಯೇ ಬಗೆಹರಿಸಿ ಕೊಡುವುದಾಗಿ ತಿಳಿಸಿದರು.
ಹೆದ್ದಾರಿಗಳ ಪ್ರತಿ ವರ್ಷದ ನಿರ್ವಹಣೆಯನ್ನು ಕಾಲ-ಕಾಲಕ್ಕೆ ಕೈಗೊಳ್ಳುವುದರ ಜೊತೆಗೆ ಯಾವುದೇ ರಸ್ತೆಯಲ್ಲಿ ಗುಂಡಿಗಳು ಬೀಳದ ಹಾಗೆ ನೋಡಿಕೊಳ್ಳಬೇಕು. ಅವಶ್ಯವಿರುವಲ್ಲಿ ಸರ್ವಿಸ್ ರಸ್ತೆ ಹಾಗೂ ಚರಂಡಿ ನಿರ್ಮಾಣವನ್ನು ಕೈಗೊಳ್ಳ ಬೇಕು ಎಂದವರು ಸೂಚನೆ ನೀಡಿದರು.
ಪರ್ಕಳದಿಂದ ಮಣಿಪಾಲವರೆಗಿನ ರಸ್ತೆ ಅಗಲೀಕರಣದ ಸಂಬಂಧ ಉಚ್ಛ ನ್ಯಾಯಾಲಯದಲ್ಲಿ ಹೂಡಿರುವ ದಾವೆಯನ್ನು ಶೀಘ್ರದಲ್ಲಿಯೇ ಇತ್ಯರ್ಥ ಪಡಿಸಲು ಕ್ರಮ ಕೈಗೊಳ್ಳಬೇಕು. ತಕರಾರು ಇಲ್ಲದ ಭಾಗದಲ್ಲಿ ಮಳೆ ಪ್ರಮಾಣ ಕಡಿಮೆ ಆಗಿರುವ ಹಿನ್ನೆಲೆ ತಕ್ಷಣವೇ ಕಾಮಗಾರಿಯನ್ನು ಪ್ರಾರಂಭಿಸಬೇಕೆಂದು ಜಿಲ್ಲಾಧಿಕಾರಿ ತಿಳಿಸಿದರು.
ಇಂದ್ರಾಳಿಯ ರೈಲ್ವೆ ಮೇಲ್ಸೇತುವೆ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ವಾಹನಗಳ ಸುಗಮ ಸಂಚಾರಕ್ಕೆ ತೊಂದರೆ ಉಂಟಾಗುತ್ತಿದೆ. ತಾತ್ಕಾಲಿಕ ರಸ್ತೆ ದುರಸ್ಥಿ ಕೈಗೊಳ್ಳಬೇಕೆಂದ ಅವರು ಕರಾವಳಿ ಜಂಕ್ಷನ್‌ನಿಂದ ಮಲ್ಪೆ ಬಂದರಿ ನವರೆಗೆ ರಸ್ತೆ ಕಾಮಗಾರಿಗೆ ಅಗತ್ಯವಿರುವ ಪೂರ್ವ ತಯಾರಿಯನ್ನು ಕೈಗೊಳ್ಳ ಬೇಕು ಎಂದರು.
ಹೆಬ್ರಿಯಿಂದ ಸೋಮೇಶ್ವರ ಒಳಗೊಂಡಂತೆ ಆಗುಂಬೆವರೆಗಿನ ರಸ್ತೆಯ ಡಾಂಬರೀಕರಣ ಕಾಮಗಾರಿಯ ಟೆಂಡರ್ ಪ್ರಕ್ರಿಯೆಯನ್ನು ಶೀಘ್ರ ದಲ್ಲೆಯೇ ಪೂರ್ಣಗೊಳಿಸಿ ಕಾಮಗಾರಿಯನ್ನು ಪ್ರಾರಂಬಿಸಬೇಕು ಎಂದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷಾಧಿಕಾರಿ ವಿಷ್ಣುವರ್ಧನ್, ಉಪ ವಿಭಾಗಾಧಿಕಾರಿ ರಾಜು, ಭಾರತ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕರು, ಅಭಿಯಂತರರು ಹಾಗೂ ಜಿಲ್ಲಾ ಮಟ್ಟದ ಅನುಷ್ಠಾನಾಧಿಕಾರಿ ಗಳು ಉಪಸ್ಥಿತರಿದ್ದರು.







