ಎನ್‍ಇಪಿ ಮೂಲಕ ಶಿಕ್ಷಣವನ್ನು ಕೇಸರಿಕರಣ-ಖಾಸಗಿಕರಣ ಮಾಡುವ ಹುನ್ನಾರ: ಮಾಜಿ ಸಂಸದ ಧೃವನಾರಾಯಣ್

ಬೆಂಗಳೂರು, ಸೆ. 29: ‘ಶ್ರೇಣಿಕೃತ ವ್ಯವಸ್ಥೆ ಮೇಲೆ ನಂಬಿಕೆ ಇಟ್ಟಿರುವ ಮನುವಾದಿ ಬಿಜೆಪಿ ದೇಶದ ಶಿಕ್ಷಣವನ್ನು ಕೇಸರಿಕರಣ ಮಾಡುವುದರ ಜತೆಗೆ ಖಾಸಗಿಕರಣ ಮಾಡಲು ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಆತುರದಲ್ಲಿ ಜಾರಿಗೆ ತರಲು ಮುಂದಾಗಿದೆ. ಇದು ರಾಜ್ಯದ ಸ್ವಾಯತ್ತತೆ ಹಾಗೂ ಒಕ್ಕೂಟ ವ್ಯವಸ್ಥೆಗೆ ಮಾರಕವಾಗಿದೆ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಧೃವನಾರಾಯಣ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬುಧವಾರ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬಿಜೆಪಿ ಸರಕಾರದ ನೂತನ ಶಿಕ್ಷಣ ನೀತಿ ನಗರ ಹಾಗೂ ಗ್ರಾಮಾಂತರ, ಬಡವ ಹಾಗೂ ಶ್ರೀಮಂತ ವಿದ್ಯಾರ್ಥಿಗಳ ನಡುವೆ ಕಂದಕ ನಿರ್ಮಾಣ ಮಾಡಲಿದೆ. ಈ ನೀತಿಯ ಬಗ್ಗೆ ಚರ್ಚೆ, ಸಂಶೋಧನೆ, ಸಂಸತ್, ಸದನದಲ್ಲಿ ಸಾಧಕ ಬಾಧಕ ಬಗ್ಗೆ ಚರ್ಚೆಯಾಗಬೇಕಿತ್ತು. ಆದರೆ, ಈ ಚರ್ಚೆಯಾಗದೇ ಈ ನೀತಿ ಜಾರಿಯಾಗುತ್ತಿರುವುದು ದುರದೃಷ್ಟಕರ' ಎಂದು ಟೀಕಿಸಿದರು.
‘ಎನ್‍ಇಪಿಯಿಂದ ಶೈಕ್ಷಣಿಕ ಕ್ಷೇತ್ರಕ್ಕೆ ಹಿನ್ನಡೆಯಾಗಲಿದೆ. ಯಾವುದೇ ಶಿಕ್ಷಣ ನೀತಿ ಜಾರಿಗೆ ತರುವಾಗ ಅದಕ್ಕೆ ಮುನ್ನೋಟ, ದೂರದೃಷ್ಟಿ ಇರಬೇಕು, ಈ ಶಿಕ್ಷಣ ನೀತಿ ಅವೈಜ್ಞಾನಿಕವಾದುದು. ಈ ನೀತಿಯ ಕನ್ನಡ ಅವತರಣಿಕೆಯಲ್ಲಿ 11.1ರಲ್ಲಿ 7ನೆ ಶತಮಾನದಲ್ಲಿ ಬಾಣ ಭಟ್ಟ ಬರೆದ ಕೃತಿ ಕಾದಂಬರಿ ಆಧಾರಿತ 64 ವಿದ್ಯೆ ಕಲಿಸಿಕೊಡಲಾಗುವುದು ಎಂದು ಹೇಳಲಾಗಿದೆ. ಅಂದರೆ, ಈ ಶಿಕ್ಷಣ ನೀತಿ ಕೇವಲ ಕಾಲ್ಪನಿಕ ಶಿಕ್ಷಣ ನೀತಿಯಾಗಿದ್ದು, ಇದು ಅವೈಜ್ಞಾನಿಕವಾಗಿದೆ’ ಎಂದು ದೂರಿದರು.
‘ಈ ಶಿಕ್ಷಣ ನೀತಿಯನ್ನು ಡಾ.ಕಸ್ತೂರಿರಂಗನ್ ಅವರ ಸಮಿತಿ ಆಧಾರದ ಮೇಲೆ ಜಾರಿಗೆ ತರಲಾಗುತ್ತಿದೆ. ಅವರು ಇಸ್ರೋ ಹಾಗೂ ಎಜುಸ್ಯಾಟ್ ಶಿಕ್ಷಣ ವಿಚಾರವಾಗಿ ಸಾಕಷ್ಟು ಕೆಲಸ ಮಾಡಿದ್ದು, ಅವರ ಬಗ್ಗೆ ನಮಗೆ ಅಪಾರ ಗೌರವವಿದೆ. ಆದರೆ, ಈ ಸಮಿತಿಯಲ್ಲಿ ಬಹುತೇಕ ಸದಸ್ಯರು ಆರೆಸೆಸ್ಸ್ ಮೂಲದವರು. ಶ್ರೀಧರನ್ ಎಂಬುವವರು ಆರೆಸೆಸ್ಸ್ ಸಂಚಾಲಕರು. ಇನ್ನು ನಡ್ಡಾ ಅವರ ಜತೆ ಕೆಲಸ ಮಾಡಿದ್ದ ರಾಜೇಂದ್ರ ಪ್ರತಾಪ್ ಗುಪ್ತಾ ಅವರು ಸದಸ್ಯರಾಗಿದ್ದರು. ಆ ಮೂಲಕ ಶಿಕ್ಷಣವನ್ನು ಕೇಸರಿಕರಣ ಮಾಡುವ ಹುನ್ನಾರ ನಡೆದಿದೆ.
ಈ ನೀತಿ ನಮ್ಮ ರಾಜ್ಯಗಳ ಸ್ವಾಯತ್ತತೆ ಹಾಗೂ ಒಕ್ಕೂಟ ವ್ಯವಸ್ಥೆಗೆ ಭಂಗ ಉಂಟು ಮಾಡುವ ಶಿಕ್ಷಣ ನೀತಿಯಾಗಿದೆ. ತ್ರಿಭಾಷಾ ನೀತಿ ಮೂಲಕ ಹಿಂದಿ ಹಾಗೂ ಸಂಸ್ಕೃತ ಭಾಷೆ ಹೇರುವ ಪ್ರಯತ್ನ ಈ ನೀತಿ ಮೂಲಕ ನಡೆಯುತ್ತಿದೆ. ಈ ಶಿಕ್ಷಣ ನೀತಿಯನ್ನು ಪಶ್ಚಿಮ ಬಂಗಾಳ, ತಮಿಳುನಾಡು ಸೇರಿದಂತೆ ಅನೇಕ ರಾಜ್ಯಗಳು ವಿರೋಧ ವ್ಯಕ್ತಪಡಿಸಿವೆ. ಈ ನೀತಿಯಲ್ಲಿ ಮೂರನೇ ವಯಸ್ಸಿಗೆ ಶಾಲೆಗೆ ಸೇರಿಸಬೇಕಿದೆ.ಅಂದರೆ ಅದಕ್ಕೆ ಬೇಕಾದ ಮೂಲಭೂತ ಸೌಕರ್ಯ ಮಾಡಿಕೊಳ್ಳಬೇಕು. ಗ್ರಾಮಾಂತರ ಪ್ರದೇಶದಲ್ಲಿ ಅಂಗನವಾಡಿ ಕೇಂದ್ರಗಳು ಈ ವಯಸ್ಸಿನ ಮಕ್ಕಳ ಶಿಕ್ಷಣ ಕೇಂದ್ರವಾಗಿದೆ. ದೇಶದಲ್ಲಿ 3.62ಲಕ್ಷ ಅಂಗನವಾಡಿ ಕೇಂದ್ರಗಳಿದ್ದು, ಅದರಲ್ಲಿ ಶೇ.50ರಷ್ಟು ಬಾಡಿಗೆ ಕಟ್ಟಡದಲ್ಲಿದ್ದು, ನೀರು ಹಾಗೂ ಶೌಚಾಲಯ ವ್ಯವಸ್ಥೆ ಇಲ್ಲ. ಅಂಗನವಾಡಿ ಕಾರ್ಯಕರ್ತೆಯರಿಗೆ ವೇತನ ಬದಲು ಕೇವಲ 4,500 ರೂ.ಗೌರವ ಧನ ನೀಡಲಾಗುತ್ತಿದೆ. ಇವರಿಗೆ ಯಾವುದೇ ತರಬೇತಿ ಇಲ್ಲ. ಆದರೆ, ಸರಕಾರ ಈಗ ಇವರಿಗೆ 6 ತಿಂಗಳು ತರಬೇತಿ ನೀಡಲಾಗುವುದು ಎಂದು ಹೇಳುತ್ತಿದೆ.
ದೇಶದಲ್ಲಿ ಸುಮಾರು 10 ಲಕ್ಷ ಸರಕಾರಿ ಶಾಲೆ ಶಿಕ್ಷಕರ ಕೊರತೆ ಇದೆ. ಅದು ನೇಮಕವಾಗಬೇಕು, ಶಾಲೆ, ಮೂಲಭೂತ ಸೌಕರ್ಯ ಇಲ್ಲದೆ, ತರಾತುರಿಯಲ್ಲಿ ಈ ವರ್ಷವೇ ಈ ನೀತಿ ಜಾರಿಗೆ ತರಲು ಪ್ರಯತ್ನಿಸುತ್ತಿದ್ದಾರೆ. ಈ ನೀತಿ ಜಾರಿಗೆ ತರಲು ಯಾವುದೇ ರಾಜ್ಯವೂ ಮುಂದೆ ಬಂದಿಲ್ಲ. ಆದರೆ, ಕರ್ನಾಟಕದಲ್ಲಿ ಮೊದಲ ಬಾರಿಗೆ ಜಾರಿಗೆ ತರಲಾಗಿದೆ ಎಂದು ಕೀರ್ತಿ ಪಡೆಯಲು ಈ ರೀತಿ ಆತುರ ಮಾಡಲಾಗುತ್ತಿದೆ. ಕರ್ನಾಟಕದಂತಹ ಪ್ರಗತಿಪರ ರಾಜ್ಯದಲ್ಲಿ ಶಿಕ್ಷಕರ ಕೊರತೆ, ಅಂಗನವಾಡಿ ಸೌಲಭ್ಯಗಳ ಕೊರತೆ ಇರುವಾಗ ಜಾರಿಗೆ ತರಲು ಮುಂದಾಗಿದೆ.
ಈ ನೀತಿಯಲ್ಲಿ ಎಸ್ಸಿ-ಎಸ್ಟಿ, ಹಿಂದುಳಿದವರಿಗೆ ಎಲ್ಲಿಯೂ ಮೀಸಲಾತಿ, ವಿದ್ಯಾರ್ಥಿ ವೇತನ ವಿಚಾರವಾಗಿ ಉಲ್ಲೇಖ ಮಾಡಿಲ್ಲ. ಹೀಗಾಗಿ ಈ ವರ್ಗದ ವಿದ್ಯಾರ್ಥಿಗಳಿಗೆ ಮುಂದೆ ಯಾವ ರೀತಿ ಅನುಕೂಲವಾಗಲಿದೆ ಎಂಬ ಆತಂಕ ಸೃಷ್ಟಿಯಾಗಿದೆ. ಈ ನೀತಿಯಿಂದ ಖಾಸಗಿ ಶಿಕ್ಷಣಕ್ಕೆ ಹೆಚ್ಚಿನ ಅವಕಾಶ ನೀಡಲಾಗಿದೆ. ಶಿಕ್ಷಣ ಸಂಸ್ಥೆಗಳಿಗೆ ಹಣಕಾಸು ಹಾಗೂ ಆಡಳಿತ ವಿಚಾರವಾಗಿ ಸ್ವಾಯತ್ತತೆ ನೀಡಲಾಗುವುದು. ಖಾಸಗಿ ಸಂಸ್ಥೆಗಳಿಗೆ ಈ ಅಧಿಕಾರ ನೀಡಿದರೆ, ಈಗಾಗಲೇ ಡೊನೆಷನ್ ಹಾವಳಿ ಹೆಚ್ಚಾಗಿರುವಾಗ ಇದು ಬಡವರನ್ನು ಶಿಕ್ಷಣ ಹೆಸರಿನಲ್ಲಿ ಸುಲಿಗೆ ಮಾಡಲು ಮುಂದಾಗುತ್ತಾರೆ. ಆಗ ಸರಕಾರ ಶುಲ್ಕ ನಿಯಂತ್ರಣ ಮಾಡಲು ಸಾಧ್ಯವಿರುವುದಿಲ್ಲ ಎಂದು ಅವರು ಎಚ್ಚರಿಸಿದರು.
ಸರಕಾರ ತರಾತುರಿಯಲ್ಲಿ ಶಿಕ್ಷಣ ನೀತಿ ಜಾರಿ ನಿರ್ಧಾರ ಕೈಬಿಟ್ಟು, ಈ ನೀತಿ ಬಗ್ಗೆ ಚರ್ಚೆಗೆ ಅವಕಾಶ ನೀಡಿ, ಇದಕ್ಕೆ ಬೇಕಾದ ಮೂಲಸೌಕರ್ಯ ಅಭಿವೃದ್ಧಿಗೆ ಆದ್ಯತೆ ನೀಡಿ ನಂತರ ಇದನ್ನು ಜಾರಿಗೆ ತರಲು ಮುಂದಾಗಬೇಕು. ಇಲ್ಲದಿದ್ದರೆ ಇದು ಬಿಜೆಪಿ ಸರಕಾರದ ಮತ್ತೊಂದು ದುರಂತವಾಗಲಿದೆ. ಈಗಾಗಲೇ ನೋಟು ರದ್ದತಿ ಸೇರಿದಂತೆ ಅನೇಕ ದುರಂತಗಳಿಂದ ದೇಶ ನಲುಗುವಂತಾಗಿದೆ’ ಎಂದು ಟೀಕಿಸಿದರು.
ಕೋಮುವಾದವೂ ತಾಲಿಬಾನ್ ಸಂಸ್ಕೃತಿಯೇ: ‘ಬಿಜೆಪಿಯವರು ತಾಲಿಬಾನ್‍ನವರು' ಎಂಬ ಸಿದ್ದರಾಮಯ್ಯ ಅವರ ಹೇಳಿಕೆ ಪ್ರತಿಕ್ರಿಯಿಸಿದ ಅವರು, ‘ತಾಲಿಬಾನ್ ಸಂಸ್ಕೃತಿ ಎಂದರೆ ಬಂದೂಕು ಹಿಡಿಯಲೇಬೇಕಿಲ್ಲ. ಜಾತಿ, ಧರ್ಮಗಳ ನಡುವೆ ವಿಷಬೀಜ ಬಿತ್ತಿ ಕಂದಕ ಮೂಡಿಸುವ ಕೋಮುವಾದವೂ ತಾಲಿಬಾನ್ ಸಂಸ್ಕೃತಿಯೇ. ಆರೆಸೆಸ್ಸ್‍ನಿಂದ ಸಾಮರಸ್ಯ ಮೂಡಿಸುವ ಪ್ರಯತ್ನ ಎಲ್ಲಿ ಆಗಿದೆ? ಈ ವಿಚಾರದಲ್ಲಿ ಅವರ ಕೊಡುಗೆ ಏನಿದೆ? ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹಾಗೂ ನಂತರದ ದಿನಗಳಲ್ಲಿ ದೇಶಕ್ಕೆ ಅವರ ಕೊಡುಗೆ ಏನು? ಈ ನಿಟ್ಟಿನಲ್ಲಿ ಸಿದ್ದರಾಮಯ್ಯ ಅವರು ಈ ಹೇಳಿಕೆ ಕೊಟ್ಟಿದ್ದಾರೆ’ ಎಂದರು.
ಎನ್‍ಎಸ್‍ಯುಐ ಘಟಕದ ಅಧ್ಯಕ್ಷ ಕೀರ್ತಿ ಗಣೇಶ್, ಉಪಾಧ್ಯಕ್ಷ ಜಯಂತ್, ಪ್ರಧಾನ ಕಾರ್ಯದರ್ಶಿಗಳಾದ ಮಾರುತಿ ಹಾಗೂ ಫಾರೂಕ್, ರಫಿ, ರಾಷ್ಟ್ರೀಯ ಸಂಚಾಲಕ ಫಹದ್, ಕೆಪಿಸಿಸಿ ಮಾಧ್ಯಮ ಹಾಗೂ ಸಂವಹನ ವಿಭಾಗದ ಸಹ ಸಂಚಾಲಕ ಸಲೀಂ ಉಪಸ್ಥಿತರಿದ್ದರು.







