ಸ್ಯಾನಿಟರಿ ನ್ಯಾಪ್‌ಕಿನ್ ವಿಲೇಗೆ ಕಿಲ್ಪಾಡಿ ಗ್ರಾಪಂನಿಂದ ‘ಪಿಂಕ್ ಬಾಕ್ಸ್’ ಪರಿಕಲ್ಪನೆ

ಮಂಗಳೂರು, ಸೆ.29: ತ್ಯಾಜ್ಯವನ್ನು ಮೂಲದಲ್ಲಿಯೇ ಬೇರ್ಪಡಿಸಿ, ಸಂಗ್ರಹಿಸಿ, ವೈಜ್ಞಾನಿಕವಾಗಿ ಸೂಕ್ತ ರೀತಿಯಲ್ಲಿ ವಿಲೇ ಮಾಡುವುದು ಸದ್ಯದ ಅನಿವಾರ್ಯತೆಯಾಗಿದೆ. ಘನ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆಯಾಗದೇ ಇದ್ದರೂ ಕಸ ವಿಲೇವಾರಿಯ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಿ, ಹಸಿ ಕಸವನ್ನು ಮನೆಯ ಹಂತದಲ್ಲಿಯೇ ಪೈಪ್ ಕಾಂಪೋಸ್ಟ್ ಮೂಲಕ ವಿಲೇಗೊಳಿಸುವ ಹಾಗೂ ಘನ ತ್ಯಾಜ್ಯವನ್ನು ಗ್ರಾಪಂನಿಂದಲೇ ಸಂಗ್ರಹಿಸುವ ವಿನೂತನ ಪ್ರಯತ್ನಕ್ಕೆ ಮಂಗಳೂರು ತಾಲೂಕಿನ ಕಿಲ್ಪಾಡಿ ಗ್ರಾಪಂ ಮುಂದಾಗಿದೆ.
ಸರಕಾರದ ನಿರ್ದೇಶನದಂತೆ ಸ್ಯಾನಿಟರಿ ನ್ಯಾಪ್‌ಕಿನ್‌ಗಳನ್ನು ವಿಲೇಗೊಳಿಸಲು ಈಗಾಗಲೇ ಇನ್ಸಿನರೇಟರ್ ಯಂತ್ರವನ್ನು ಪಂಚಾಯತ್ ಖರೀದಿಸಿದೆ. ಈಗ ನ್ಯಾಪ್‌ಕಿನ್‌ಗಳನ್ನು ಸಂಗ್ರಹಿಸಲು ‘ಋತು’ ಎಂಬ ಶೀರ್ಷಿಕೆಯಡಿ ‘ಪಿಂಕ್ ಬಾಕ್ಸ್’ ಪರಿಕಲ್ಪನೆಯನ್ನು ಜಾರಿಗೆ ತಂದಿದೆ.
ಆರಂಭದಲ್ಲಿ ಸ್ವಲ್ಪ ಕಷ್ಟವೆನಿಸಿದರೂ ನಿಧಾನವಾಗಿ ಸಾರ್ವಜನಿಕರು ಗ್ರಾಪಂನ ಕಾಳಜಿಯನ್ನು ಅರ್ಥ ಮಾಡಿಕೊಂಡು ಪಂಚಾಯತ್‌ನೊಂದಿಗೆ ಕೈ ಜೋಡಿಸುತ್ತಿದ್ದಾರೆ. ಮನೆಯಲ್ಲಿ ಉತ್ಪತ್ತಿಯಾಗುವ ಒಣಕಸವನ್ನು ಗ್ರಾಪಂನಿಂದ ಮನೆ ಮನೆಗೆ ತೆರಳುವ ಕಸ ಸಂಗ್ರಹಣೆ ವಾಹನಕ್ಕೆ ನೀಡುತ್ತಿರುವುದು ಖುಷಿಯ ವಿಚಾರ. ಹಸಿ ಮತ್ತು ಒಣ ಕಸಕ್ಕೊಂದು ದಾರಿ ಹುಡುಕಿದ್ದರು. ಆದರೆ ಮಹಿಳೆಯರು ಬಳಸಿ ಎಲ್ಲೆಂದರಲ್ಲಿ ಬೀಸಾಡುತ್ತಿದ್ದ ಸ್ಯಾನಿಟರಿ ನ್ಯಾಪ್‌ಕಿನ್‌ಗಳ ಸಂಗ್ರಹ ಮಾತ್ರ ಸವಾಲಾಗಿ ಪರಿಣಮಿಸಿತ್ತು.
ಏನಿದು ಪಿಂಕ್ ಬಾಕ್ಸ್?: ಗ್ರಾಪಂ ಕಚೇರಿ ಸೇರಿದಂತೆ ಗ್ರಾಪಂ ವ್ಯಾಪ್ತಿಯ ಪ್ರತಿಯೊಂದು ಶಾಲೆ ಹಾಗೂ ಅಂಗನವಾಡಿ ಕೇಂದ್ರಕ್ಕೆ ಒಂದರಂತೆ ಗುಲಾಬಿ ಬಣ್ಣದ ಬುಟ್ಟಿಗಳನ್ನು ಮಕ್ಕಳ ಕೈಗೆ ಸಿಗದಷ್ಟು ಎತ್ತರದಲ್ಲಿರುವಂತೆ ಕೇವಲ ಮಹಿಳೆಯರು ಪ್ರವೇಶಿಸುವಂತಹ ಸ್ಥಳಗಳಲ್ಲಿ ಅಳವಡಿಸಲಾಗುವುದು. ವಿದ್ಯಾರ್ಥಿನಿಯರು ಹಾಗೂ ಗ್ರಾಮದ ಮಹಿಳೆಯರು ತಾವು ಬಳಸಿದ ಸ್ಯಾನಿಟರಿ ನ್ಯಾಪ್‌ಕಿನ್‌ಗಳನ್ನು ಪೇಪರ್‌ನಲ್ಲಿ ಸುತ್ತಿ ತಂದು ಆ ಗುಲಾಬಿ ಬಾಕ್ಸ್‌ನಲ್ಲಿ ತಂದು ಹಾಕುತ್ತಾರೆ. ದಿನಕ್ಕೊಮ್ಮೆ ಪ್ರತಿ ಕೇಂದ್ರಕ್ಕೂ ಭೇಟಿ ನೀಡುವ ಸಿಬ್ಬಂದಿ ಸೂಕ್ತ ಮುಂಜಾಗರೂಕರೆಯೊಂದಿಗೆ ಸಂಗ್ರಹಿಸಿ, ಈಗಾಗಲೇ ಅಳವಡಿಸಿರುವ ಇನ್ಸಿನರೇಟರ್ ಯಂತ್ರದ ಮೂಲಕ ವಿಲೇವಾರಿ ಮಾಡುತ್ತಾರೆ.
ಸುಮಾರು 900 ಡಿಗ್ರಿ ಸೆಲ್ಸಿಯಸ್ ಉಂಷ್ಣಾಂಶದಲ್ಲಿ ಉರಿಯುವ ಈ ಆಧುನಿಕ ಯಂತ್ರವು ಏಕಕಾಲಕ್ಕೆ 50ರಿಂದ 60 ಸ್ಯಾನಿಟರಿ ನ್ಯಾಪ್‌ಕಿನ್‌ಗಳನ್ನು 20 ನಿಮಿಷಗಳಲ್ಲಿ ಸುಟ್ಟು ಬೂದಿ ಮಾಡುತ್ತದೆ. ಅಷ್ಟು ಪ್ರಮಾಣದ ಸ್ಯಾನಿಟರಿ ನ್ಯಾಪ್‌ಕಿನ್‌ಗಳನ್ನು ಸುಡುವಾಗಲೂ ಅದರಿಂದ ಹೊರಬರುವ ಅಲ್ಪ ಪ್ರಮಾಣದ ಹೊಗೆಯು ಆರೋಗ್ಯದ ಮೇಲೆ ಯಾವುದೇ ರೀತಿಯ ದುಷ್ಪರಿಣಾಮ ಉಂಟು ಮಾಡಲಾರದು ಎಂಬುದು ವೈಜ್ಞಾನಿಕವಾಗಿ ಸಾಬೀತಾಗಿದೆ.
ಏಕಕಾಲಕ್ಕೆ 60 ಪ್ಯಾಡ್‌ಗಳನ್ನು ದಹಿಸಿದಾಗಲೂ ಕೇವಲ ಗರಿಷ್ಠ ಶೇ.1ರಷ್ಟು ಮಾತ್ರ ಬೂದಿ ಉಳಿಯುತ್ತದೆ. ಅದನ್ನು ಟಾಯ್ಲೆಟ್‌ಗೆ ಹಾಕಿಬಿಡಬಹುದು. ಇದುವರೆಗೂ ಸ್ವಸ್ಥ ಸಮಾಜಕ್ಕೊಂದು ಸವಾಲಾಗಿದ್ದ, ಬಳಸಿ ಅಲ್ಲಲ್ಲಿ ಬೀಸಾಡುತ್ತಿದ್ದ ಸ್ಯಾನಿಟರಿ ನ್ಯಾಪ್‌ಕಿನ್‌ಗಳಿಂದ ಪರಿಸರಕ್ಕೆ ಹಾಗೂ ಮನುಕುಲಕ್ಕೆ ಉಂಟಾಗಬಹುದಾದ ಹಾನಿಯನ್ನು ಸಂಪೂರ್ಣವಾಗಿ ತಡೆಗಟ್ಟಲು ಸಾಧ್ಯವಾಗುತ್ತದೆ ಎನ್ನುವುದು ಸಂತಸದ ವಿಷಯವಾಗಿದೆ.







