ಆಹಾರ ಶೈಲಿಯ ಬದಲಾವಣೆಯಿಂದ ಮಧುಮೇಹ

ಪಡುಬಿದ್ರಿ: ಇತ್ತೀಚಿನ ದಿನಗಳಲ್ಲಿ ಹದಿಹರೆಯದ ಯುವಕ, ಯುವತಿಯರಲ್ಲೂ ಮಧುಮೇಹ ಕಂಡುಬರುತ್ತಿದ್ದು, ಇದಕ್ಕೆ ಆಹಾರ ಪದ್ಧತಿಯಲ್ಲಿ ಆಗಿರುವ ಬದಲಾವಣೆಯೇ ಕಾರಣ. ಈ ನಿಟ್ಟಿನಲ್ಲಿ ಜನರಿಗೆ ಈ ಬಗ್ಗೆ ಅರಿವು ಮೂಡಿಸಬೇಕಾಗಿದೆ ಎಂದು ಪಡುಬಿದ್ರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ರಾಜೇಶ್ವರಿ ಕಿಣಿ ಕೆ. ಹೇಳಿದರು.
ಅವರು ಪಡುಬಿದ್ರಿ ಆರೋಗ್ಯ ಕೇಂದ್ರದಲ್ಲಿ ಬುಧವಾರ ರೋಟರಿ ಕ್ಲಬ್ ಪಡುಬಿದ್ರಿ, ಇನ್ನರ್‍ವೀಲ್ ಕ್ಲಬ್ ಪಡುಬಿದ್ರಿ, ರೋಟರಿ ಸಮುದಾಯ ದಳ ಇದರ ಜಂಣಟಿ ಸಹಯೋಗದಲ್ಲಿ ಉಚಿತ ಮಧುಮೇಹ ತಪಾಸಣೆ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಜೀವನ ಶೈಲಿ, ಆಹಾರ ಪದ್ಧತಿ ಶಾರೀರಿಕ ವ್ಯಾಯಾಮವನ್ನು ಮಾಡುವ ಮೂಲಕ ಮಧುಮೇಹವನ್ನು ನಿಯಂತ್ರಣದಲ್ಲಿಡಲು ಸಾಧ್ಯ. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕಾಗಿದೆ ಎಂದು ಅವರು ಹೇಳಿದರು.
ಪಡುಬಿದ್ರಿ ರೋಟರಿ ಕ್ಲಬ್ ಅಧ್ಯಕ್ಷ ಮೊಹಮ್ಮದ್ ನಿಯಾಝ್ ಅಧ್ಯಕ್ಷತೆ ವಹಿಸಿದ್ದರು. ಇನ್ನರ್‍ವೀಲ್ ಕ್ಲಬ್ ಅಧ್ಯಕ್ಷೆ ಅನಿತಾ ವಿ.ಬಿ, ಸಮುದಾಯ ದಳದ ಅಧ್ಯಕ್ಷೆ ಲಾವಣ್ಯ ಪೂಜಾರಿ, ರೋಟರಿ ಕ್ಲಬ್ ಕಾರ್ಯದರ್ಶಿ ಬಿ.ಎಸ್. ಆಚಾರ್ಯ, ಕಾರ್ಯಕ್ರಮ ನಿರ್ದೇಶಕರಾದ ಪುಷ್ಪಲತಾ, ಶೋಭಾ ಉಪಸ್ಥಿತರಿದ್ದರು. ಸುಧಾಕರ ಕೆ. ಕಾರ್ಯಕ್ರಮ ನಿರ್ವಹಿಸಿದರು.
ಆರೋಗ್ಯ ಕೇಂದ್ರ ಪಡುಬಿದ್ರಿ, ಹೆಜಮಾಡಿ ಕೋಡಿಯ ಅಂಗನವಾಡಿ, ಎಸ್‍ಎಲ್‍ಆರ್‍ಎಮ್ ಘಟಕದ ಪೌರ ಕಾರ್ಮಿಕರು, ಪಡುಬಿದ್ರಿ ಗ್ರಾಮ ಪಂಚಾಯಿತಿ, ಪಡುಬಿದ್ರಿ ಮೀನು ಮಾರುಕಟ್ಟೆ, ಮಾರ್ಕೆಟ್ ಪ್ರದೇಶ, ಪಡುಬಿದ್ರಿಯ ಕರ್ನಾಟಕ ಪಬ್ಲಿಕ್ ಶಾಲೆಯ ಶಿಕ್ಷಕರಿಗೆ, ಪಡುಬಿದ್ರಿ ಅಂಗನವಾಡಿ ಕೇಂದ್ರಗಳಲ್ಲಿ ಉಚಿತ ಮಧುಮೇಹ ತಪಾಸಣೆ ನಡೆಯಿತು. ಒಟ್ಟು 400ಕ್ಕೂ ಅಧಿಕ ಮಂದಿಯ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು.







