13,165 ಕೋ.ರೂ.ವೆಚ್ಚದಲ್ಲಿ ಸೇನೆಯ ಆಧುನೀಕರಣ ಪ್ರಸ್ತಾವಕ್ಕೆ ರಕ್ಷಣಾ ಸಚಿವಾಲಯದ ಪ್ರಾಥಮಿಕ ಒಪ್ಪಿಗೆ
ಹೊಸದಿಲ್ಲಿ,ಸೆ.29: ಸಶಸ್ತ್ರ ಪಡೆಗಳ ಆಧುನೀಕರಣಕ್ಕಾಗಿ 13,165 ಕೋ.ರೂ.ಗಳ ಪ್ರಸ್ತಾವಗಳಿಗೆ ರಕ್ಷಣಾ ಸಚಿವಾಲಯವು ಬುಧವಾರ ಪ್ರಾಥಮಿಕ ಒಪ್ಪಿಗೆಯನ್ನು ನೀಡಿದೆ. 25 ಧ್ರುವ ಲಘು ಹೆಲಿಕಾಪ್ಟರ್ಗಳು,ನಿಖರ ನಿರ್ದೇಶಿತ ಯುದ್ಧಸಾಮಗ್ರಿಗಳು, ಕ್ಷಿಪಣಿಗಳು ಮತ್ತು ರಾಕೆಟ್ ಮದ್ದುಗುಂಡುಗಳು ಇತ್ಯಾದಿಗಳ ಖರೀದಿ ಈ ಪ್ರಸ್ತಾವಗಳಲ್ಲಿ ಒಳಗೊಂಡಿದೆ.
ಸೇನೆ,ನೌಕಾಪಡೆ ಮತ್ತು ವಾಯುಪಡೆಗಳ ಆಧುನೀಕರಣ ಮತ್ತು ಕಾರ್ಯಾಚರಣೆ ಅಗತ್ಯಗಳಿಗಾಗಿ ಹಲವಾರು ಪ್ರಸ್ತಾವಗಳನ್ನು ರಕ್ಷಣಾ ಸಚಿವ ರಾಜನಾಥ ಸಿಂಗ್ ಅಧ್ಯಕ್ಷತೆಯ ರಕ್ಷಣಾ ಖರೀದಿ ಮಂಡಳಿಯು ಒಪ್ಪಿಕೊಂಡಿತು. 13,165 ಕೋ.ರೂ.ಗಳ ಪೈಕಿ 11,486 ಕೋ.ರೂ.(ಶೇ.87)ಗಳ ಖರೀದಿಯನ್ನು ಸ್ವದೇಶಿ ತಯಾರಕರಿಂದ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.
ಸೇನೆಯು ಸರಕಾರಿ ಸ್ವಾಮ್ಯದ ಎಚ್ಎಎಲ್ನಿಂದ 3,800 ಕೋ.ರೂ.ಗಳ ವೆಚ್ಚದಲ್ಲಿ ಇನ್ನೂ 25 ಧ್ರುವ ಲಘು ಹೆಲಿಕಾಪ್ಟರ್ಗಳನ್ನು ಪಡೆದುಕೊಳ್ಳಲಿದೆ. ಎಚ್ಎಎಲ್ ಕಳೆದ 20 ವರ್ಷಗಳಲ್ಲಿ ಸುಮಾರು 300 ಧ್ರುವ ಹೆಲಿಕಾಪ್ಟರ್ಗಳನ್ನು ಉತ್ಪಾದಿಸಿದೆ.
ಸ್ವದೇಶಿ ವಿನ್ಯಾಸಗಳು ಮತ್ತು ಮದ್ದುಗುಂಡುಗಳ ಅಭಿವೃದ್ಧಿಯನ್ನು ಉತ್ತೇಜಿಸಲು ಸ್ವದೇಶಿ ಮೂಲಗಳಿಂದ 4,962 ಕೋ.ರೂ.ಗಳ ವೆಚ್ಚದಲ್ಲಿ ನಿಖರ ನಿರ್ದೇಶಿತ ಯುದ್ಧಸಾಮಗ್ರಿಗಳು ಮತ್ತು ರಾಕೆಟ್ ಮದ್ದುಗುಂಡುಗಳ ಖರೀದಿಗೂ ಮಂಡಳಿಯು ಒಪ್ಪಿಗೆಯನ್ನು ನೀಡಿದೆ. 4,353 ಕೋ.ರೂ.ವೆಚ್ಚದ ಇತರ ಪ್ರಸ್ತಾವಗಳಿಗೂ ಸಮ್ಮತಿ ಲಭಿಸಿದೆ ಎಂದು ಅಧಿಕಾರಿಗಳು ತಿಳಿಸಿದರು.







