ಮುಂಬೈ:ವಾಕಿಂಗ್ ಸ್ಟಿಕ್ ನೊಂದಿಗೆ ಚಿರತೆ ವಿರುದ್ಧ ಹೋರಾಡಿದ ಮಹಿಳೆ

ಮುಂಬೈ: ಮಧ್ಯವಯಸ್ಸಿನ ಮಹಿಳೆಯೊಬ್ಬರು ತನ್ನ ವಾಕಿಂಗ್ ಸ್ಟಿಕ್‌ನಿಂದ ಚಿರತೆಯೊಂದಿಗೆ ಹೋರಾಟ ನಡೆಸಿ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಬುಧವಾರ ಸಂಜೆ ಮುಂಬೈನ ಆರೆ ಡೈರಿ ಪ್ರದೇಶದಲ್ಲಿ ನಡೆದಿದೆ. ಇಡೀ ಘಟನೆಯು ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಈ ಪ್ರದೇಶದಲ್ಲಿ ಮೂರು ದಿನಗಳಲ್ಲಿ ಎರಡನೇ ಬಾರಿ ಚಿರತೆ ದಾಳಿ ನಡೆದಿದೆ..
ಆರೆ ಡೈರಿ ಪ್ರದೇಶದ ಬಳಿ ಚಿರತೆ ನಡೆಯುತ್ತಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಕಂಡುಬಂದಿದ್ದು, ಒಂದು ನಿಮಿಷದ ನಂತರ, ಮಹಿಳೆಯೊಬ್ಬರು ನಿಧಾನವಾಗಿ ತನ್ನ ವಾಕಿಂಗ್ ಸ್ಟಿಕ್ ಸಹಾಯದಿಂದ ಅಲ್ಲಿಗೆ ಪ್ರವೇಶಿಸುತ್ತಾರೆ. ನಿರ್ಮಲಾ ದೇವಿ ಸಿಂಗ್ (55) ಎಂದು ಗುರುತಿಸಲ್ಪಟ್ಟ ಮಹಿಳೆ ನಂತರ ಸ್ವಲ್ಪ ಎತ್ತರದ ಕಟ್ಟೆಯ ಮೇಲೆ ಕುಳಿತುಕೊಳ್ಳಲು ಮುಂದಾದಾಗ ಚಿರತೆ ಮಹಿಳೆಯ ಕಡೆಗೆ ತಿರುಗುತ್ತದೆ. ಮಹಿಳೆ ಚಿರತೆಯನ್ನು ಗಮನಿಸಿದ ತಕ್ಷಣ, ಅದನ್ನು ತನ್ನ ಕೋಲಿನಿಂದ ದೂರ ತಳ್ಳಲು ಪ್ರಯತ್ನಿಸುತ್ತಾರೆ. ಮುಂದಿನ ಕೆಲವು ಸೆಕೆಂಡುಗಳಲ್ಲಿ ಚಿರತೆ ಮಹಿಳೆಯ ಮೇಲೆ ಎರಗಲು ಪ್ರಯತ್ನಿಸಿದಾಗ ಮಹಿಳೆ ಹಿಂದೆ ಬೀಳುತ್ತಾರೆ. ಸ್ವಲ್ಪ ಸಮಯದ ನಂತರ ಚಿರತೆ ಹಿಮ್ಮೆಟ್ಟುತ್ತದೆ.
ಘಟನೆಯಲ್ಲಿ ಮಹಿಳೆಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಸಹಾಯಕ್ಕಾಗಿ ಮಹಿಳೆಯ ಬೊಬ್ಬೆ ಕೇಳಿದ ನಂತರ ಕೆಲವು ಜನರು ಮಹಿಳೆಯ ಕಡೆಗೆ ಧಾವಿಸುತ್ತಿರುವುದು ಕಂಡುಬಂದಿದೆ.