ಪೊಲೀಸ್ ದಾಳಿ ವೇಳೆ ಉದ್ಯಮಿ ಸಾವು ಪ್ರಕರಣ : ಕೋರ್ಟ್ ಕೇಸುಗಳು ವರ್ಷಗಟ್ಟಲೆ ತೆಗೆದುಕೊಳ್ಳುತ್ತವೆ ಎಂದ ಅಧಿಕಾರಿಗಳು
ವೀಡಿಯೋ ವೈರಲ್

ಸಾಂದರ್ಭಿಕ ಚಿತ್ರ
ಲಕ್ನೋ: ಇತ್ತೀಚೆಗೆ ಗೋರಖಪುರ್ನ ಹೋಟೆಲ್ ಒಂದರ ಮೇಲೆ ಪೊಲೀಸರು ತಡರಾತ್ರಿ ನಡೆಸಿದ ದಾಳಿ ವೇಳೆ ಉದ್ಯಮಿ ಮನೀಶ್ ಗುಪ್ತಾ ಮೃತಪಟ್ಟ ಘಟನೆಯ ನಂತರದ ಬೆಳವಣಿಗೆಯಲ್ಲಿ ಈ ಪ್ರಕರಣದಲ್ಲಿ ಕೋರ್ಟ್ ಕೇಸ್ ದಾಖಲಿಸದಂತೆ ಉದ್ಯಮಿಯ ಕುಟುಂಬಕ್ಕೆ ರಾಜ್ಯದ ಉನ್ನತ ಅಧಿಕಾರಿಗಳು ಮನವೊಲಿಸುತ್ತಿರುವ ವೀಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ದೇಶಾದ್ಯಂತ ವ್ಯಾಪಕ ಆಕ್ರೋಶ ಮೂಡಿಸಿರುವ ಈ ಪ್ರಕರಣ ಸಂಬಂಧ ಈಗಾಗಲೇ ಆರು ಪೊಲೀಸರನ್ನು ವಜಾಗೊಳಿಸಲಾಗಿದೆ ಹಾಗೂ ಅವರಲ್ಲಿ ನಾಲ್ಕು ಮಂದಿಯ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ.
ಇದೀಗ ವೈರಲ್ ಆಗಿರುವ ವೀಡಿಯೋವನ್ನು ಯಾರು ಚಿತ್ರೀಕರಿಸಿದ್ದಾರೆಂದು ತಿಳಿದಿಲ್ಲವಾದರೂ ಮೃತ ಉದ್ಯಮಿಯ ಕುಟುಂಬ ಸದಸ್ಯರೊಬ್ಬರು ಗೋರಖಪುರ್ ಜಿಲ್ಲಾ ಮ್ಯಾಜಿಸ್ಟ್ರೇಟ್ ವಿಜಯ್ ಕಿರಣ್ ಆನಂದ್ ಹಾಗೂ ಪೊಲೀಸ್ ಮುಖ್ಯಸ್ಥ ವಿಪಿನ್ ತಡ ಅವರನ್ನು ಭೇಟಿಯಾದ ಸಂದರ್ಭ ತೆಗೆದಿದ್ದರೆಂದು ಊಹಿಸಲಾಗಿದೆ.
"ಕೋರ್ಟ್ ಪ್ರಕರಣ ಇತ್ಯರ್ಥಗೊಳ್ಳಲು ವರ್ಷಗಳೇ ಬೇಕಾಗುತ್ತವೆ. ಓರ್ವ ಹಿರಿಯ ಸೋದರನಂತೆ ನಿಮಗೆ ಹೇಳುತ್ತಿದ್ದೇನೆ. ಕೋರ್ಟ್ ಕೇಸ್ ದಾಖಲಿಸಿದ ನಂತರ, ನೀವು ನಂಬಲಿಕ್ಕಿಲ್ಲ ಅದು ವರ್ಷಗಳೇ ಬೇಕಾಗಬಹುದು" ಎಂದು ಹೇಳುವುದು ಕೇಳಿಸುತ್ತದೆ.
ಈ ನಡುವೆ ಪೊಲೀಸ್ ಮುಖ್ಯಸ್ಥ ವಿಪಿನ್ ಮಾತನಾಡಿ "ಅವರಿಗೆ( ಪೊಲೀಸರಿಗೆ) ಯಾವುದೇ ಪೂರ್ವದ್ವೇಷವಿರಲಿಲ್ಲ. ಅವರು ಸಮವಸ್ತ್ರದಲ್ಲಿ ತೆರಳಿದ್ದರು. ಅದೇ ಕಾರಣಕ್ಕೆ ನಿಮ್ಮ ಮಾತುಗಳನ್ನು ಬೆಳಗ್ಗಿನಿಂದ ಆಲಿಸುತ್ತಿದ್ದೇನೆ. ಅವರನ್ನು ವಜಾಗೊಳಿಸುವಂತೆ ಕೇಳಿಕೊಂಡಿದ್ದೀರಿ ನಾವು ಮಾಡಿದ್ದೇವೆ, ಅವರಿಗೆ ಕ್ಲೀನ್ ಚಿಟ್ ದೊರಕುವ ತನಕ ಮತ್ತೆ ಸೇವೆಯಲ್ಲಿ ಪುನಃಸ್ಥಾಪಿಸಲಾಗುವುದಿಲ್ಲ" ಎಂದು ಹೇಳಿದ್ದಾರೆ.
"ಅವರ ಉದ್ಯೋಗಗಳನ್ನು ಸೆಳೆಯಬೇಕು" ಎಂದು ಮಹಿಳೆಯೊಬ್ಬರು ಹೇಳುವುದು ಕೇಳಿಸುತ್ತದೆ. ಆಗ ಅಧಿಕಾರಿಗಳಿಗೆ ತಮ್ಮ ಮಾತುಗಳನ್ನು ರೆಕಾರ್ಡ್ ಮಾಡಲಾಗುತ್ತಿರುವುದು ತಿಳಿದು ಅದನ್ನು ನಿಲ್ಲಿಸಲು ಹೇಳುವುದು ವೀಡಿಯೋದಲ್ಲಿ ಸೆರೆಯಾಗಿದೆ.