ಪ್ರತಿ ದಿನ 1,002 ಕೋ.ರೂ. ಆದಾಯ ಗಳಿಸುವ ಅದಾನಿ ಏಶ್ಯಾದ ಶ್ರೀಮಂತರ ಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿಕೆ: ವರದಿ

ಹೊಸದಿಲ್ಲಿ: ಪ್ರತಿದಿನ 1,002 ಕೋ.ರೂ. ಆದಾಯ ಗಳಿಸುವ ಕೈಗಾರಿಕೋದ್ಯಮಿ ಗೌತಮ್ ಅದಾನಿ ಏಷ್ಯಾದ ಶ್ರೀಮಂತರ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಏರಿದ್ದಾರೆ. ಅದಾನಿ ಸಂಪತ್ತು ಒಂದು ವರ್ಷದಲ್ಲಿ 4 ಪಟ್ಟು ಹೆಚ್ಚಳವಾಗಿದ್ದು 1,40,200 ಕೋಟಿ ರೂ.ಯಿಂದ 5,05,900 ಕೋಟಿ ರೂ.ಗೆ ಏರಿಕೆಯಾಗಿದೆ ಎಂದು ಐಐಎಫ್‌ಎಲ್ ವೆಲ್ತ್-ಹುರುನ್ ಇಂಡಿಯಾ ರಿಚ್ ಲಿಸ್ಟ್-2021 ಗುರುವಾರ ಬಿಡುಗಡೆ ಮಾಡಿರುವ ವರದಿಯಲ್ಲಿ ತಿಳಿಸಿದೆ.
ರಿಲಯನ್ಸ್ ಇಂಡಸ್ಟ್ರೀಸ್ (ಆರ್ ಐಎಲ್ ) ಅಧ್ಯಕ್ಷ ಮುಖೇಶ್ ಅಂಬಾನಿ(64 ವರ್ಷ) ಒಟ್ಟು ಸಂಪತ್ತು ಮೌಲ್ಯ 7,18,000 ಕೋಟಿ ರೂ.ಯೊಂದಿಗೆ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಮುಂದುವರಿದಿದ್ದಾರೆ. ಹಾಗೆಯೇ ಅಂಬಾನಿ ಸತತ 10 ನೇ ವರ್ಷವೂ ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದಾರೆ.
ಅದಾನಿ(59 ವರ್ಷ) ಚೀನಾದ ಬಾಟಲ್ ವಾಟರ್ ಉತ್ಪಾದಕ ಝಾಂಗ್ ಶನ್ಶಾನ್ ಅವರನ್ನು ಹಿಂದಿಕ್ಕಿ ಏಷ್ಯಾದ ಎರಡನೇ ಶ್ರೀಮಂತ ಉದ್ಯಮಿಯಾಗಿದ್ದಾರೆ. ಅದಾನಿ ಅವರ ಪ್ರತಿದಿನ ಗಳಿಕೆ 1,002 ಕೋಟಿ ರೂ.ಗೆ ಏರಿದೆ ಎಂದು ರಿಚ್ ಲಿಸ್ಟ್ ವರದಿ ತಿಳಿಸಿದೆ.
ಅದಾನಿ ಸಹೋದರರು (ಗೌತಮ್ ಹಾಗೂ ವಿನೋದ್ ಶಾಂತಿಲಾಲ್ ಅದಾನಿ) ಮೊದಲ ಬಾರಿಗೆ ಟಾಪ್ 10 ಶ್ರೀಮಂತರ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ. ವರದಿಯ ಪ್ರಕಾರ, ವಿನೋದ್ ಶಾಂತಿಲಾಲ್ ಅದಾನಿ ಅವರ ಸಂಪತ್ತು 1,31,600 ಕೋಟಿ ರೂ.ಗೆ ಏರಿಕೆಯಾಗಿದ್ದು, ಈ ಮೂಲಕ ಎಂಟನೇ ಸ್ಥಾನಕ್ಕೇರಿದ್ದಾರೆ.
ವರದಿ ಪ್ರಕಾರ, ಎಚ್‌ಸಿಎಲ್‌ನ ಶಿವ್ ನಾಡಾರ್ ಹಾಗೂ ಕುಟುಂಬವು ಒಟ್ಟು 2,36,600 ಕೋಟಿ ರೂ. ಗಳಿಕೆಯೊಂದಿಗೆ ಮೂರನೇ ಸ್ಥಾನದಲ್ಲಿದೆ. ಶ್ರೀಮಂತರ ಪಟ್ಟಿಯ ಮುಂದಿನ ಸ್ಥಾನದಲ್ಲಿ ಎಸ್‌ಪಿ ಹಿಂದುಜಾ (ರೂ 2,20,000 ಕೋಟಿ), ಎಲ್‌ಎನ್ ಮಿತ್ತಲ್ (ರೂ 1,74,400 ಕೋಟಿ), ಸೈರಸ್ ಎಸ್ ಪೂನವಾಲ್ಲಾ (ರೂ 1,74,400 ಕೋಟಿ) ಹಾಗೂ ರಾಧಕಿಶನ್ ದಮಾನಿ (ರೂ 1,54,300 ಕೋಟಿ) ಅವರಿದ್ದಾರೆ.