ರಾಜಧಾನಿ ಎಕ್ಸ್ ಪ್ರೆಸ್ ಸರಣಿ ಸ್ಫೋಟ ಪ್ರಕರಣ: 11 ವರ್ಷಗಳಾದರೂ ಆರೋಪಿ ವಿರುದ್ಧ ಇನ್ನೂ ಆರಂಭಗೊಳ್ಳದ ವಿಚಾರಣೆ

ಹೊಸದಿಲ್ಲಿ: ರಾಜಸ್ಥಾನದಲ್ಲಿ ರಾಜಧಾನಿ ಎಕ್ಸ್ ಪ್ರೆಸ್ ನ ಆರು ರೈಲುಗಳಲ್ಲಿ 1993ರಲ್ಲಿ ನಡೆದ ಸರಣಿ ಬಾಂಬ್ ಸ್ಫೋಟ ಪ್ರಕರಣಗಳಿಗೆ ಸಂಬಂಧಿಸಿದಂತೆ ಫೆಬ್ರವರಿ 2010ರಲ್ಲಿ ಹಮೀರ್-ಉಯಿ-ಉದ್ದೀನ್ ಎಂಬಾತನನ್ನು ಬಂಧಿಸಲಾಗಿತ್ತು. ಆದರೆ ಘಟನೆ ನಡೆದು ಒಂದು ದಶಕವೇ ಸಂದಿದ್ದರೂ ವಿಚಾರಣೆಯಿನ್ನೂ ಆರಂಭಗೊಂಡಿಲ್ಲ ಎಂದು theprint.in ವರದಿ ಮಾಡಿದೆ.
ಬಂಧನವಾಗಿ ಒಂಬತ್ತು ವರ್ಷಗಳ ನಂತರ ಮಾರ್ಚ್ 27, 2019ರಂದು ಆತನ ಜಾಮೀನು ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದ ನಂತರ ಆತ ಸುಪ್ರೀಂ ಕೋರ್ಟಿಗೆ ಅಪೀಲು ಸಲ್ಲಿಸಿದ್ದು ಆತನ ವಿರುದ್ಧ ದೋಷಾರೋಪವನ್ನು ಇನ್ನೂ ಏಕೆ ಹೊರಿಸಲಾಗಿಲ್ಲ ಎಂಬ ಕುರಿತು ವಿಶೇಷ ನ್ಯಾಯಾಲಯದಿಂದ ಸುಪ್ರೀಂ ಕೋರ್ಟ್ ಆಗಸ್ಟ್ 18ರ ತನ್ನ ಆದೇಶದಲ್ಲಿ ವರದಿ ಕೇಳಿತ್ತು.
ಇದಕ್ಕೆ ಪ್ರತಿಕ್ರಿಯಿಸಿದ್ದ ಅಜ್ಮೀರ್ ನ್ಯಾಯಾಲಯ, ಆತ ಮೊದಲು ಮಾರ್ಚ್ 2010ರಂದು ನ್ಯಾಯಾಲಯಕ್ಕೆ ಹಾಜರಾದ ಸಂದರ್ಭ ಪ್ರಕರಣದ ಮೂಲ ದಾಖಲೆಗಳು ತನ್ನ ಬಳಿ ಇರಲಿಲ್ಲ ಎಂದು ಹೇಳಿದೆ. ಪ್ರಕರಣದ ಇತರ 15 ಆರೋಪಿಗಳ ಪ್ರಕರಣದ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಡೆಸುತ್ತಿರುವುದರಿಂದ ದಾಖಲೆಗಳು ಅದರ ಬಳಿ ಇದೆ ಎಂದು ಅಜ್ಮೀರ್ ನ್ಯಾಯಾಲಯ ತಿಳಿಸಿತ್ತು. ಜತೆಗೆ 2019ರ ತನಕ ವಿಚಾರಣೆ ನಡೆಸಲು ಸಾರ್ವಜನಿಕ ಅಭಿಯೋಜಕರನ್ನೂ ನೇಮಿಸಲಾಗಿರಲಿಲ್ಲ.
ಇದೀಗ ಜಸ್ಟಿಸ್ ಡಿ ವೈ ಚಂದ್ರಚೂಡ್ ಅವರ ನೇತೃತ್ವದ ಸುಪ್ರೀಂ ಕೋರ್ಟ್ ಪೀಠ ಹಮೀರ್ ಪ್ರಕರಣದ ವಿಚಾರಣೆಯನ್ನು ತ್ವರಿತಗೊಳಿಸುವಂತೆ ಹಾಗೂ ಎರಡು ತಿಂಗಳೊಳಗಾಗಿ ದೋಷಾರೋಪ ಹೊರಿಸುವ ಕುರಿತು ಆದೇಶ ಹೊರಡಿಸಬೇಕೆಂದು ಹೇಳಿದೆ.
ಆರೋಪಿಯ ಜಾಮೀನು ಅಪೀಲು ಡಿಸೆಂಬರಿನಲ್ಲಿ ವಿಚಾರಣೆಯಾಗುವ ಸಾಧ್ಯತೆಯಿದೆ.