ಸಂತ ತೆರೇಸಾ ಶಾಲೆ: ಬೆಳ್ಳಿ ಹಬ್ಬ ಸಮಾರಂಭ
ಮಂಗಳೂರು, ಸೆ.30: ಬೆಥನಿ ಸಂಸ್ಥೆಯ ಅಧೀನಕ್ಕೆ ಒಳಪಟ್ಟ ಮಂಗಳೂರಿನ ಬೆಂದೂರಿನ ಪ್ರತಿಷ್ಠಿತ ವಿದ್ಯಾಸಂಸ್ಥೆಯಾದ ಸಂತ ತೆರೇಸಾ ಶಾಲೆಯು ತನ್ನ 25 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದ ಹಿನ್ನೆಲೆಯಲ್ಲಿ ಬೆಳ್ಳಿ ಹಬ್ಬವನ್ನು ಆಚರಿಸಿಕೊಂಡಿತು.
ಬೆಂದೂರಿನ ಸಂತ ಸೆಬಾಸ್ಟಿಯನ್ ಸಭಾಂಗಣದಲ್ಲಿ ಈ ಸಮಾರಂಭ ನಡೆಯಿತು. ಮೊದಲಿಗೆ ಸಂತ ಸೆಬಾಸ್ಟಿಯನ್ ಚರ್ಚ್‌ನಲ್ಲಿ ಮಂಗಳೂರು ಪ್ರಾಂತ್ಯದ ವಿಕಾರ್ ಜನರಲ್ ವ.ಫಾ. ಮ್ಯಾಕ್ಸಿಮ್ ನೊರೊನ್ಹಾ ಬಲಿಪೂಜೆಯನ್ನು ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಮಂಗಳೂರು ವಿಶ್ವವಿದ್ಯಾನಿಲಯದ ಉಪಕುಲಪತಿ ಡಾ.ಪಿ. ಸುಬ್ರಹ್ಮಣ್ಯ ಯಡಪಡಿತ್ತಾಯ ಮಾತನಾಡಿ, ಬೆಥನಿ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳಲ್ಲಿ ನೈತಿಕ ಮೌಲ್ಯಗಳನ್ನು ಬೆಳೆಸುತ್ತಾ ಬಂದಿವೆ. ಎಲ್ಲ ವಿದ್ಯಾರ್ಥಿಗಳು ತಮ್ಮಲ್ಲಿ ಧನಾತ್ಮಕ ಚಿಂತನೆಯನ್ನು ಬೆಳೆಸಿಕೊಳ್ಳಬೇಕೆಂದು ಅವರು ಕರೆ ನೀಡಿದರು.
ಬಳಿಕ ನಡೆದ ಬೆಳ್ಳಿಹಬ್ಬ ಮಹೋತ್ಸವದಲ್ಲಿ ಸಂತ ಸೆಬಾಸ್ಟಿಯನ್ ಚರ್ಚಿನ ಧರ್ಮಗುರು ವ.ಫಾ.ವಿನ್ಸೆಂಟ್ ಮೊಂತೇರೊ ಆಶೀರ್ವಚನ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬೆಥನಿ ಸಂಸ್ಥೆಯ ಸುಪೀರಿಯರ್ ಜನರಲ್ ಹಾಗೂ ಬೆಥನಿ ಎಜುಕೇಶನಲ್ ಸೊಸೈಟಿಯ ಅಧ್ಯಕ್ಷರಾದ ರೋಸ್ ಸೆಲಿನ್ ಸಂತ ತೆರೇಸಾ ಶಾಲೆಯ 25 ವರ್ಷಗಳ ಪಯಣದ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಿದರು. ಕಾರ್ಯಕ್ರಮದಲ್ಲಿ ಮತ್ತೋರ್ವ ಅತಿಥಿ ಮಾರ್ಜರಿ ಟೆಕ್ಸೇರಾ ಮಾತನಾಡಿದರು.
ಈ ಸಂದರ್ಭದಲ್ಲಿ ಬೆಥನಿ ಎಜುಕೇಶನಲ್ ಸೊಸೈಟಿಯ ಅಧ್ಯಕ್ಷರಾಗಿ, ಉಪಾಧ್ಯಕ್ಷರಾಗಿ, ಶಾಲಾ ಸಂಚಾಲಕರಾಗಿ, ಪ್ರಾಂಶುಪಾಲರಾಗಿ ಮತ್ತು ಶಾಲಾ ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ ಎಲ್ಲರಿಗೂ ಗೌರವವನ್ನು ಸಲ್ಲಿಸಲಾಯಿತು.
ಬೆಥನಿ ಸಂಸ್ಥೆಯ ಉಪಾಧ್ಯಕ್ಷರಾದ ಲಿಲ್ಲೀಸ್ ಬಿ.ಎಸ್., ಬೆಥನಿ ಎಜುಕೇಶನಲ್ ಸೊಸೈಟಿಯ ಕಾರ್ಯದರ್ಶಿ ಹಾಗೂ ಶಾಲಾ ಸಂಚಾಲಕರಾದ ಮಾರಿಯೆಟ್ ಬಿ.ಎಸ್., ಶಾಲೆಯ ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷರಾದ ಶೆರ್ಲಿನ್ ರೆಬಿಂಬಸ್ ಹಾಗೂ ಸಮೀರ್ ಮುಂತಾದವರು ಉಪಸ್ಥಿತರಿದ್ದರು. ಶಾಲಾ ಪ್ರಾಂಶುಪಾಲ ಲೂರ್ಡ್ಸ್ ಸ್ವಾಗತಿಸಿದರು. ಶಿಕ್ಷಕಿ ವೀಣಾ ಸಲ್ಡಾನ್ಹಾ ವಂದಿಸಿದರು.







