ಜಮ್ಮು-ಕಾಶ್ಮೀರ: ಪತ್ರಕರ್ತರಿಗೆ ಕಿರುಕುಳ ದೂರುಗಳ ತನಿಖೆಗೆ ಪಿಸಿಐ ಸಮಿತಿ ರಚನೆ

photo: twitter.com/presscouncil_in
ಹೊಸದಿಲ್ಲಿ,ಸೆ.30: ಜಮ್ಮು-ಕಾಶ್ಮೀರದಲ್ಲಿ ಪತ್ರಕರ್ತರು ಅನಗತ್ಯ ಕಿರುಕುಳಗಳನ್ನು ಎದುರಿಸುತ್ತಿದ್ದಾರೆ ಎಂಬ ಪಿಡಿಪಿ ಅಧ್ಯಕ್ಷೆ ಮೆಹಬೂಬ ಮುಫ್ತಿ ಅವರ ಆರೋಪದ ಕುರಿತು ತನಿಖೆ ನಡೆಸಲು ಭಾರತೀಯ ಪತ್ರಿಕಾ ಮಂಡಳಿ (ಪಿಸಿಐ)ಯು ಸತ್ಯಶೋಧನಾ ಸಮಿತಿಯನ್ನು ರಚಿಸಿದೆ.
ಸಮಿತಿಯು ದೈನಿಕ್ ಭಾಸ್ಕರ್ನ ಸಮೂಹ ಸಂಪಾದಕ ಪ್ರಕಾಶ ದುಬೆ,ನ್ಯೂ ಇಂಡಿಯಾ ಎಕ್ಸ್ ಪ್ರೆಸ್ ನ ಪತ್ರಕರ್ತ ಗುರ್ಬೀರ್ ಸಿಂಗ್ ಮತ್ತು ಜನಮೋರ್ಚಾದ ಸಂಪಾದಕಿ ಸುಮನ ಗುಪ್ತಾ ಅವರನ್ನು ಒಳಗೊಂಡಿದೆ. ಅಧಿಕಾರಿಗಳು ಮತ್ತು ಕಾಶ್ಮೀರದಲ್ಲಿ ಕಿರುಕುಳಕ್ಕೆ ಒಳಗಾಗಿದ್ದಾರೆ ಎನ್ನಲಾಗಿರುವ ಪತ್ರಕರ್ತರ ಜೊತೆ ಚರ್ಚಿಸುವಂತೆ ಹಾಗೂ ಸಾಧ್ಯವಾದಷ್ಟು ಶೀಘ್ರ ವರದಿಯನ್ನು ಸಲ್ಲಿಸುವಂತೆ ಸಮಿತಿಗೆ ಸೂಚಿಸಲಾಗಿದೆ.
ಸತ್ಯಶೋಧನಾ ಸಮಿತಿಯ ತನಿಖೆಯಲ್ಲಿ ಸಂಪೂರ್ಣ ಸಹಕಾರ ಮತ್ತು ನೆರವು ನೀಡುವಂತೆ ಜಮ್ಮು-ಕಾಶ್ಮೀರದಲ್ಲಿನ ಅಧಿಕಾರಿಗಳನ್ನೂ ಪಿಸಿಐ ಕೋರಿಕೊಂಡಿದೆ.
2019 ಆಗಸ್ಟ್ನಲ್ಲಿ ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಹಿಂದೆಗೆದುಕೊಂಡ ಬಳಿಕ ಪತ್ರಕರ್ತರಿಗೆ ಕಿರುಕುಳಗಳನ್ನು ನೀಡಲಾಗುತ್ತಿದೆ ಎಂದು ದೂರಿ ಮುಫ್ತಿ ಸೋಮವಾರ ಪಿಸಿಐ ಮತ್ತು ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾಕ್ಕೆ ಪತ್ರಗಳನ್ನು ಬರೆದಿದ್ದರು.
ಪತ್ರಕರ್ತರಿಗೆ ಕಿರುಕುಳ ನೀಡುವುದು ಮಾಮೂಲಾಗಿಬಿಟ್ಟಿದೆ ಮತ್ತು ಕ್ಷುಲ್ಲಕ ಕಾರಣಗಳಿಂದ ಅವರನ್ನು ಗುರಿಯಾಗಿಸಿಕೊಳ್ಳಲಾಗು ತ್ತಿದೆ ಎಂದು ಹೇಳಿದ್ದ ಮುಫ್ತಿ,ಸೆ.8ರಂದು ನಾಲ್ವರು ಪತ್ರಕರ್ತರ ನಿವಾಸಗಳ ಮೇಲಿನ ದಾಳಿಗಳನ್ನು ಉಲ್ಲೇಖಿಸಿ ಅವರ ಮೊಬೈಲ್ ಫೋನ್ಗಳು, ಲ್ಯಾಪ್ಟಾಪ್ಗಳು,ಎಟಿಎಂ ಕಾರ್ಡ್ಗಳು ಮತ್ತು ಅವರ ಪತ್ನಿಯರ ಪಾಸ್ಪೋರ್ಟ್ಗಳನ್ನು ಕಾನೂನುಬಾಹಿರವಾಗಿ ವಶಪಡಿಸಿಕೊಳ್ಳಲಾಗಿದೆ ಎಂದು ಆರೋಪಿಸಿದ್ದರು.
'ಕಾಶ್ಮೀರ್ ಫೈಟ್'ಎಂಬ ಬ್ಲಾಗ್ನ ಬಗ್ಗೆ ಈ ಪತ್ರಕರ್ತರನ್ನು ಪ್ರಶ್ನಿಸಲಾಗಿತ್ತು ಎಂದು ಹಿರಿಯ ಪೊಲೀಸ್ ಅಧಿಕಾರಿಯೋರ್ವರು ಸುದ್ದಿಸಂಸ್ಥೆಗೆ ತಿಳಿಸಿದ್ದರು. ಪಾಕಿಸ್ತಾನದಿಂದ ಈ ಬ್ಲಾಗ್ನ್ನು ನಿರ್ವಹಿಸಲಾಗುತ್ತಿದೆ ಎಂದು ವರದಿಗಳು ಹೇಳಿದ್ದವು. ಪ್ರದೇಶದಲ್ಲಿ ಪತ್ರಕರ್ತರ ಬಂಧನ ಮತ್ತು ಅವರಿಗೆ ಬೆದರಿಕೆಯ ಬಗ್ಗೆ ವಿಶ್ವಸಂಸ್ಥೆಯು ಕಳೆದ ಜೂನ್ನಲ್ಲಿ ಕಳವಳ ವ್ಯಕ್ತಪಡಿಸಿತ್ತು.







