ಪ್ರತಿ ಲೀ.ಪೆಟ್ರೋಲ್ ಗೆ 25 ಪೈಸೆ,ಡೀಸೆಲ್ಗೆ 30 ಪೈಸೆ ಏರಿಕೆ
ಹೊಸದಿಲ್ಲಿ,ಸೆ.30: ಗುರುವಾರ ದೇಶಾದ್ಯಂತ ಪ್ರತಿ ಲೀ.ಪೆಟ್ರೋಲ್ ಬೆಲೆಯನ್ನು 25 ಪೈಸೆ ಮತ್ತು ಡೀಸೆಲ್ಗೆ 30 ಪೈಸೆ ಹೆಚ್ಚಿಸಲಾಗಿದೆ.
ಎರಡು ದಿನಗಳಲ್ಲಿ ಎರಡನೇ ಸಲ ಇಂಧನ ಬೆಲೆಗಳನ್ನು ಪರಿಷ್ಕರಿಸಲಾಗಿದೆ. ಸೆ.28ರಂದು ಪ್ರತಿ ಲೀ.ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಅನುಕ್ರಮವಾಗಿ 25 ಪೈಸೆ ಮತ್ತು 27 ಪೈಸೆ ಹೆಚ್ಚಿಸಲಾಗಿತ್ತು. ಈ ಎರಡು ಏರಿಕೆಗಳಿಂದ ಪೆಟ್ರೋಲ್ ಬೆಲೆಗಳು ಜುಲೈನ ದಾಖಲೆ ಮಟ್ಟವನ್ನು ಸಮೀಪಿಸಿವೆ. ಆಗ ಪೆಟ್ರೋಲ್ ಬೆಲೆ ದಿಲ್ಲಿಯಲ್ಲಿ 101.84 ರೂ. ಮತ್ತು ಮುಂಬೈನಲ್ಲಿ 107.83 ರೂ.ಆಗಿತ್ತು.
ಗುರುವಾರ ದಿಲ್ಲಿ ಮತ್ತು ಮುಂಬೈಗಳಲ್ಲಿ ಪ್ರತಿ ಲೀ.ಪೆಟ್ರೋಲ್ ಬೆಲೆ ಅನುಕ್ರಮವಾಗಿ 101.64 ರೂ. ಮತ್ತು 107.71 ರೂ.ಆಗಿದ್ದರೆ,ಡೀಸೆಲ್ ಬೆಲೆ 89.87 ರೂ. ಮತ್ತು 97.52 ರೂ.ಗೇರಿದೆ.
ಸೆಪ್ಟಂಬರ್ 24ರಿಂದೀಚಿಗೆ ಪ್ರತಿ ಲೀ.ಡೀಸೆಲ್ ಬೆಲೆಯಲ್ಲಿ 1.25 ರೂ.ಏರಿಕೆಯಾಗಿದೆ.
ಅತ್ತ ಅಂತರರಾಷ್ಟ್ರಿಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಗಳು ಮೂರು ವರ್ಷಗಳ ಎತ್ತರಕ್ಕೆ ತಲುಪಿವೆ. ಬ್ರೆಂಟ್ ಕಚ್ಚಾ ತೈಲ ಪ್ರತಿ ಬ್ಯಾರೆಲ್ಗೆ 78.64 ಡಾ.(ಸುಮಾರು 5,814 ರೂ.)ಗೇರಿದೆ.
ಭಾರತವು ತನ್ನ ಶೇ.85ರಷ್ಟು ತೈಲ ಅಗತ್ಯಗಳಿಗೆ ಆಮದನ್ನು ಅವಲಂಬಿಸಿದೆ.
ಮೇ ಮತ್ತು ಜೂನ್ ನಡುವೆ ಪ್ರತಿ ಲೀ.ಪೆಟ್ರೋಲ್ ಬೆಲೆ 11.44 ರೂ. ಮತ್ತು ಡೀಸೆಲ್ ಬೆಲೆ 9.14 ರೂ.ಏರಿಕೆಯಾಗಿದ್ದರೆ,ಇದೇ ಅವಧಿಯಲ್ಲಿ ಅಂರರಾಷ್ಟ್ರೀಯ ಕಚ್ಚಾ ತೈಲದರ ಪ್ರತಿ ಬ್ಯಾರೆಲ್ಗೆ 65.15 ಡಾ.ಗಳಿಂದ 75.39 ಡಾ.ಗೆ ಹೆಚ್ಚಿತ್ತು.







