ನೇಪಾಳ: ಜನಗಣತಿಯ ಲಿಂಗ ಸೂಚಕ ಕಾಲಂನಲ್ಲಿ ‘ಇತರರು’ ಆಯ್ಕೆ ಜಾರಿ
ಕಠ್ಮಂಡು, ಸೆ.30: ಇದೇ ಮೊದಲ ಬಾರಿಗೆ ನೇಪಾಳದ ಜನಗಣತಿಯ ಸಂದರ್ಭ ತೃತೀಯ ಲಿಂಗಿ ವಿಭಾಗವನ್ನು ಸೂಚಿಸುವ ‘ಇತರರು’ ಕಾಲಂ ಅನ್ನು ಸೇರಿಸಲಾಗಿದ್ದು ಇದರಿಂದ ತೃತೀಯ ಲಿಂಗಿಗಳ ಸಮುದಾಯಕ್ಕೆ ಹೆಚ್ಚಿನ ಹಕ್ಕುಗಳು ದೊರಕುವ ನಿರೀಕ್ಷೆಯಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
30 ಮಿಲಿಯನ್ ಜನಸಂಖ್ಯೆ ಇರುವ ನೇಪಾಳದಲ್ಲಿ ಶನಿವಾರದಿಂದ ಜನಗಣತಿ ಆರಂಭವಾಗಿದ್ದು ಅಧಿಕಾರಿಗಳು ಪ್ರತೀ ಮನೆಗೆ ಭೇಟಿ ನೀಡಿ ವಿವರ ಸಂಗ್ರಹಿಸುತ್ತಿದ್ದಾರೆ. ಜನಗಣತಿಯಲ್ಲಿ ಲಿಂಗವನ್ನು ಸೂಚಿಸುವ ಕಾಲಂನಲ್ಲಿ ‘ಪುರುಷ, ಸ್ತ್ರೀ’ ಜೊತೆಗೆ ‘ಇತರರು’ ಎಂಬ ವರ್ಗವನ್ನೂ ನೀಡಲಾಗಿದೆ.
2013ರಲ್ಲಿ ಪೌರತ್ವ ದಾಖಲೆ ಪತ್ರದಲ್ಲಿ ತೃತೀಯ ಲಿಂಗಿ ಕಾಲಂ ಅಳವಡಿಸಲಾಗಿದ್ದರೆ, 2015ರಲ್ಲಿ ಪಾಸ್ಪೋರ್ಟ್ಗೆ ಸಲ್ಲಿಸುವ ಅರ್ಜಿಯಲ್ಲೂ ತೃತೀಯ ಲಿಂಗಿ ಕಾಲಂ ಅಳವಡಿಸಲಾಗಿದೆ. ಆದರೂ ದೇಶದಲ್ಲಿ ಸುಮಾರು 9 ಲಕ್ಷದಷ್ಟಿರುವ ತೃತೀಯ ಲಿಂಗಿ ಸಮುದಾಯ ಉದ್ಯೋಗ, ಆರೋಗ್ಯಸೇವೆ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಈಗಲೂ ತಾರತಮ್ಯ ಎದುರಿಸುತ್ತಿದೆ ಎಂದು ಈ ಸಮುದಾಯದವರ ಹಕ್ಕು ರಕ್ಷಣೆಗಾಗಿ ಕಾರ್ಯನಿರ್ವಹಿಸುವ ಕಾರ್ಯಕರ್ತರು ಹೇಳಿದ್ದಾರೆ.
ಇದೀಗ ಜನಗಣತಿಯಲ್ಲಿ ಇವರ ಅಂಕಿಅಂಶ ದಾಖಲಾದರೆ ಆಗ, ಅವರ ಹಕ್ಕಿಗಾಗಿ ಹೋರಾಡುವಾಗ ಸೂಕ್ತ ಪುರಾವೆ ಸಿಗುತ್ತದೆ. ತೃತೀಯ ಲಿಂಗಿಗಳ ಜನಸಂಖ್ಯೆಯ ಪ್ರಮಾಣದ ಆಧಾರದಲ್ಲಿ ಅವರಿಗೆ ಇನ್ನಷ್ಟು ಹಕ್ಕುಗಳನ್ನು ಆಗ್ರಹಿಸಬಹುದಾಗಿದೆ ಎಂದು ಕಾರ್ಯಕರ್ತರು ಹೇಳಿದ್ದಾರೆ.







