ಐಪಿಎಲ್ :ಸನ್ ರೈಸರ್ಸ್ ವಿರುದ್ಧ ಚೆನ್ನೈ ಜಯಭೇರಿ, ಪ್ಲೇ ಆಫ್ ಗೆ ತೇರ್ಗಡೆ

photo: twitter.com/IPL
ಶಾರ್ಜಾ, ಸೆ.30: ಆರಂಭಿಕ ಬ್ಯಾಟ್ಸ್ ಮನ್ ಗಳಾದ ಋತುರಾಜ್ ಗಾಯಕ್ವಾಡ್(45, 38 ಎಸೆತ, 4 ಬೌಂಡರಿ, 2 ಸಿಕ್ಸರ್) ಹಾಗೂ ಎಫ್ ಡು ಪ್ಲೆಸಿಸ್(41, 36 ಎಸೆತ, 3 ಬೌಂಡರಿ, 2 ಸಿಕ್ಸರ್)ಮೊದಲ ವಿಕೆಟ್ ಗೆ ನಡೆಸಿದ 75 ರನ್ ಜೊತೆಯಾಟ ಹಾಗೂ ಅಂಬಟಿ ರಾಯುಡು(ಔಟಾಗದೆ 17) ಹಾಗೂ ನಾಯಕ ಧೋನಿಯವರ(ಔಟಾಗದೆ 14) ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಐಪಿಎಲ್ ಟ್ವೆಂಟಿ-20 ಟೂರ್ನಿಯ 44ನೇ ಪಂದ್ಯದಲ್ಲಿ ಆರು ವಿಕೆಟ್ ಗಳ ಅಂತರದಿಂದ ಗೆಲುವು ದಾಖಲಿಸಿದೆ.
ಈ ಗೆಲುವಿನ ಮೂಲಕ ಚೆನ್ನೈ ತಂಡ 14ನೇ ಆವೃತ್ತಿಯ ಐಪಿಎಲ್ ನಲ್ಲಿ ಸೆಮಿ ಫೈನಲ್ ಆಗಿರುವ ಪ್ಲೇ ಆಫ್ ಹಂತಕ್ಕೆ ತೇರ್ಗಡೆಯಾದ ಮೊದಲ ತಂಡವೆಂಬ ಹಿರಿಮೆಗೆ ಪಾತ್ರವಾಯಿತು. ಚೆನ್ನೈ 11ನೇ ಬಾರಿ ಸೆಮಿ ಫೈನಲ್ ತಲುಪಿದೆ.
ಗುರುವಾರ ನಡೆದ ಪಂದ್ಯದಲ್ಲಿ ಗೆಲುವಿಗೆ 135 ರನ್ ಗುರಿ ಪಡೆದ ಚೆನ್ನೈ 19.4 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 139 ರನ್ ಗಳಿಸಿ ಜಯಭೇರಿ ಬಾರಿಸಿತು.
ಹೈದರಾಬಾದ್ ಬೌಲಿಂಗ್ ವಿಭಾಗದಲ್ಲಿ ಜೇಸನ್ ಹೋಲ್ಡರ್(3-27)ಮೂರು ವಿಕೆಟ್ ಕಬಳಿಸಿದರು.







