ವಿನಾಯಕ ಬಾಳಿಗಾ ಕೊಲೆ ಪ್ರಕರಣ; ಕಾಮತ್‌ರನ್ನು ಎಸ್‌ಪಿಪಿಯಾಗಿ ನೇಮಿಸಿದ್ದ ಸರಕಾರದ ಆದೇಶ ರದ್ದುಪಡಿಸಿದ ಹೈಕೋರ್ಟ್

ಬೆಂಗಳೂರು, ಸೆ.30: ಮಂಗಳೂರಿನ ಮಾಹಿತಿ ಹಕ್ಕು ಕಾರ್ಯಕರ್ತ ವಿನಾಯಕ ಪಾಂಡುರಂಗ ಬಾಳಿಗಾ ಕೊಲೆ ಪ್ರಕರಣದಲ್ಲಿ ಪ್ರಾಸಿಕ್ಯೂಷನ್ ಪರ ವಾದ ಮಂಡಿಸಲು ವಿಶೇಷ ಸರಕಾರಿ ಅಭಿಯೋಜಕರನ್ನಾಗಿ(ಎಸ್‌ಪಿಪಿ) ಹಿರಿಯ ವಕೀಲ ರವೀಂದ್ರನಾಥ ಕಾಮತ್ ಅವರನ್ನು ನೇಮಿಸಿ ಸರಕಾರ ಹೊರಡಿಸಿದ್ದ ಆದೇಶವನ್ನು ಗುರುವಾರ ಹೈಕೋರ್ಟ್ ರದ್ದುಪಡಿಸಿದೆ.
ರಾಜ್ಯ ಸರಕಾರದ ಆದೇಶ ಪ್ರಶ್ನಿಸಿ ಬಾಳಿಗಾ ಕೊಲೆ ಪ್ರಕರಣದ ಪ್ರಮುಖ ಆರೋಪಿ ನರೇಶ್ ಶೆಣೈ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ನೇತೃತ್ವದ ಏಕ ಸದಸ್ಯ ಪೀಠವು ಈ ಆದೇಶ ಮಾಡಿದೆ.
ಹೊಸ ವಿಶೇಷ ಸರಕಾರಿ ಅಭಿಯೋಜಕರನ್ನು ನೇಮಿಸಲು ಅರ್ಜಿಯಲ್ಲಿ 6ನೆ ಪ್ರತಿವಾದಿಯಾಗಿರುವ ಬಾಳಿಗಾ ಸಹೋದರಿ ಅನುರಾಧಾ ಬಾಳಿಗಾ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಲು ಮುಕ್ತ ಅವಕಾಶ ಹೊಂದಿದ್ದಾರೆ. ಒಂದೊಮ್ಮೆ ಬಾಳಿಗಾ ಸಹೋದರಿ ಅನುರಾಧಾ ಮನವಿ ಸಲ್ಲಿಸಿದರೆ, ಅರ್ಜಿಯನ್ನು ಕಾನೂನು ಪ್ರಕಾರ ಪರಿಗಣಿಸಬೇಕು ಎಂದು ರಾಜ್ಯ ಸರಕಾರಕ್ಕೆ ಪೀಠ ನಿರ್ದೇಶಿಸಿದೆ.
ಮಂಗಳೂರಿನ ಕೊಡಿಯಾಲ್ ಬೈಲ್‌ನಲ್ಲಿ ಆರ್‌ಟಿಐ ಕಾರ್ಯಕರ್ತ ವಿನಾಯಕ ಬಾಳಿಗಾ ಅವರನ್ನು 2016ರ ಮಾ.21ರ ಬೆಳಗಿನ ಜಾವ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು. ಈ ಪ್ರಕರಣಗಳಲ್ಲಿ ಪ್ರಾಸಿಕ್ಯೂಷನ್ ಪರ ವಾದ ಮಂಡಿಸಲು ರವೀಂದ್ರನಾಥ್ ಕಾಮತ್ ಅವರನ್ನು ನೇಮಿಸಿ 2016ರ ಡಿ.21ರಂದು ರಾಜ್ಯ ಸರಕಾರ ಆದೇಶ ಹೊರಡಿಸಿತ್ತು.







