ದಿಲ್ಲಿ: ಮಾಜಿ ಅಧಿಕಾರಿಗಳು, ನಿವೃತ್ತ ನ್ಯಾಯಾಧೀಶರ ಭದ್ರತೆ ಹಿಂತೆಗೆತ ಇಲ್ಲವೇ ಕಡಿಮೆ ದರ್ಜೆಗೆ ಇಳಿಕೆ
ಪರಿಶೋಧನಾ ವರದಿ ಬಳಿಕ ದಿಲ್ಲಿ ಪೊಲೀಸರ ಕ್ರಮ
ಹೊಸದಿಲ್ಲಿ, ಸೆ.30: ದಿಲ್ಲಿ ಪೊಲಿಸ್ ಇಲಾಖೆಯು ತನ್ನ ಹಲವಾರು ಮಾಜಿ ಅಧಿಕಾರಿಗಳು, ನಿವೃತ್ತ ನ್ಯಾಯಾಧೀಶರು ಮತ್ತಿತರ ಅಧಿಕಾರಿಗಳ ಭದ್ರತೆಯನ್ನು ದಿಲ್ಲಿ ಪೊಲೀಸರು ಹಿಂತೆಗೆದುಕೊಂಡಿದ್ದಾರೆ ಅಥವಾ ಕಡಿಮೆಮಟ್ಟಕ್ಕಿಳಿಸಿದೆ. ದಿಲ್ಲಿ ಪೊಲೀಸ್ ಆಯುಕ್ತ ರಾಕೇಶ್ ಅಸ್ತಾನಾ ಅವರ ನಿರ್ದೇಶನದಂತೆ ನಡೆಸಲಾದ ಪರಿಶೋಧನಾ ಸಮೀಕ್ಷೆಯ ಬಳಿಕ ಈ ಕ್ರಮವನ್ನು ಕೈಗೊಳ್ಳಲಾಗಿದೆ. ಭದ್ರತಾ ಘಟಕಗಳಿಗೆ ನಿಯೋಜಿತರಾದ ಅಧಿಕಾರಿಗಳ ಕರ್ತವ್ಯನಿರ್ವಹಣೆಯ ವೌಲ್ಯಮಾಪನ ನಡೆಸುವಂತೆ ಸುಪ್ರೀಂಕೋರ್ಟ್ ಆದೇಶ ನೀಡಿತ್ತು.
ಧನಬಾದ್ನ ಹೆಚ್ಚುವರಿ ಸೆಶನ್ಸ್ ನ್ಯಾಯಾಧೀಶ ಉತ್ತಮ್ ಆನಂದ್ ಅವರನ್ನು ಅನುಮಾನಾಸ್ಪದ ಸನ್ನಿವೇಶಗಳಲ್ಲಿ ಹತ್ಯೆಗೈದ ಘಟನೆಯ ಹಿನ್ನೆಲೆಯಲ್ಲಿ ತನ್ನ ಹಾಗೂ ಹೈಕೋರ್ಟ್ನ ನ್ಯಾಯಾಧೀಶರಿಗೆ ಭದ್ರತಾ ವ್ಯವಸ್ಥೆಯನ್ನು ಒದಗಿಸುವಂತೆ ಮಾಡುವ ಉದ್ದೇಶದಿಂದ ಸುಪ್ರೀಂಕೋರ್ಟ್ ಈ ವೌಲ್ಯಮಾಪನಕ್ಕೆ ನಿರ್ದೇಶನ ನೀಡಿತ್ತು.
ತರುವಾಯ, ಯಾವುದೇ ಸಂಭಾವ್ಯ ಬೆದರಿಕೆಯಿಲ್ಲದಂತಹ ಮಾಜಿ ಆಯುಕ್ತರು, ರಾಜಕಾರಣಿಗಳು, ನಿವೃತ್ತ ಅಧಿಕಾರಿಗಳು ಹಾೂ ನ್ಯಾಯಾಧೀಶರುಗಳ ಭದ್ರತೆಗಾಗಿ 535 ಪೊಲೀಸ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ತರುವಾಯ ಈ ವ್ಯಕ್ತಿಗಳ ಭದ್ರತೆಯನ್ನು ಪರಾಮರ್ಶಿಸಿದ ಪೊಲೀಸರು, ಅವರಿಗೆ ನೀಡಲಾಗಿದ್ದ ಭದ್ರತಾ ಬೆಂಗಾವಲ್ನು ಹಿಂತೆಗೆದುಕೊಂಡಿದ್ದರು ಅಥವಾ ಅವರಿಗಾಗಿ ನಿಯೋಜಿತರಾಗಿದ್ದ ಭದ್ರತಾ ಅಧಿಕಾರಿಗಳ ಸಂಖ್ಯೆಯನ್ನು ಕಡಿಮೆಗೊಳಿಸಿದ್ದರು.
ಇಂತಹ ಭದ್ರತಾ ಕರ್ತವ್ಯಗಳಿಗಾಗಿ ನಿಯೋಜಿತರಾಗಿದ್ದ ಸಿಬ್ಬಂದಿಯನ್ನು ಕಾನೂನು ಸುವ್ಯವಸ್ಥೆ ಅಥವಾ ಪೊಲೀಸ್ ಕರ್ತವ್ಯಗಳಿಗೆ ಮರುನಿಯೋಜಿಸಲಾಗಿತ್ತು. ಆದರೆ ಕಳೆದ ವಾರ ದಿಲ್ಲಿಯ ನ್ಯಾಯಾಲಯದಲ್ಲಿ ನಡೆದ ಶೂಟೌಟ್ ಘಟನೆಯ ಬಳಿಕ ಜಿಲ್ಲಾ ನ್ಯಾಯಾಲಯಗಳ ಭದ್ರತೆ ಹಾಗೂ ಸುರಕ್ಷತೆಯನ್ನು ಸುಧಾರಣೆಗೊಳಿಸಬೇಕೆಂಬ ಆಗ್ರಹಗಳು ಕೇಳಿಬರತೊಡಗಿದವು. ದಿಲ್ಲಿಯ ಹೊರವಲಯದಲ್ಲಿ ರೈತ ಪ್ರತಿಭಟನೆಗಳು ಚುರುಕುಗೊಂಡಿರುವ ಹಿನ್ನೆಲೆಯಲ್ಲಿ ನಗರದ ಗಡಿಗಳು, ಸೂಕ್ಷ್ಮ ಸಂವೇದಿ ಕಟ್ಟಡಗಳು ಹಾಗೂ ಸಂಸ್ಥಾಪನೆಗಳ ಭದ್ರತೆಯನ್ನು ಕೂಡಾ ಬಿಗಿಗೊಳಿಸಲಾಗಿತ್ತು.
ವೈಯಕ್ತಿಕ ಭದ್ರತಾ ಕರ್ತವ್ಯಗಳಿಗಾಗಿ ನಿಯೋಜಿತರಾದ ಅಧಿಕಾರಿಗಳ ಸಂಖ್ಯೆಯು, ಅನುಮತಿಸಲ್ಪಟ್ಟ ಸಂಖ್ಯೆಗಿಂತ ಅಧಿಕವಾಗಿದೆ ಎಂಬುದನ್ನು ಈ ಪರಿಶೋಧನಾ ವರದಿ ಬಹಿರಂಗಪಡಿಸಿದೆ. ದಿಲ್ಲಿಯಲ್ಲಿ ವೈಯಕ್ತಿಕ ಭದ್ರತೆಗಾಗಿ ಒಟ್ಟು 5465 ಪೊಲೀಸ್ ಅಧಿಕಾರಿಗಳನ್ನು ನಿಯೋಜಿಸಲು ಅನುಮತಿಯಿದ್ದರೂ, 6868 ಮಂದಿಯನ್ನಷ್ಟೇ ನಿಯೋಜಿಸಲಾಗಿದೆ ಎಂದು ವರದಿ ತಿಳಿಸಿದೆ.