ಮರಳು ನೀತಿಯಲ್ಲಿ ಉಚಿತ ಮರಳು ನೀಡುವ ಪ್ರಸ್ತಾವ ಇಲ್ಲ: ಸಚಿವ ಹಾಲಪ್ಪ ಆಚಾರ್

ಬೆಂಗಳೂರು, ಸೆ. 30: ‘ರಾಜ್ಯದಲ್ಲಿನ ಮರಳು ಸಮಸ್ಯೆ ನಿವಾರಿಸಲು ರೂಪಿಸಿರುವ ಹೊಸ ಮರಳು ನೀತಿಯಲ್ಲಿ ಉಚಿತ ಮರಳು ನೀಡುವ ಯಾವುದೇ ಪ್ರಸ್ತಾವ ಇಲ್ಲ. ಈ ಹಿಂದೆ ಇಲಾಖೆ ಸಚಿವರು ಯಾವ ಕಾರಣಕ್ಕೆ ಉಚಿತ ಮರಳು ನೀಡುವ ಹೇಳಿಕೆ ನೀಡಿದ್ದರೂ ಗೊತ್ತಿಲ್ಲ' ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಹಾಲಪ್ಪ ಆಚಾರ್ ಇಂದಿಲ್ಲಿ ಸ್ಪಷ್ಟಣೆ ನೀಡಿದ್ದಾರೆ.
ಗುರುವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಗ್ರಾಮೀಣ ಪ್ರದೇಶದಲ್ಲಿ ಬಡವರು ಹಾಗೂ ಸಾಮಾನ್ಯಜನ ಮನೆ ನಿರ್ಮಿಸಲು ಅನುಕೂಲವಾಗುವಂತೆ ಉಚಿತ ಮರಳು ನೀತಿ ಜಾರಿಗೆ ತರುತ್ತೇವೆ ಎಂದು ಹೇಳಿಕೆ ನೀಡಿದ್ದರು. ಅದನ್ನು ನಾನೂ ಗಮನಿಸಿದ್ದೇನೆ. ಆದರೆ, ನೂತನ ಮರಳು ನೀತಿಯಲ್ಲಿ ಉಚಿತ ಮರಳು ನೀಡುವ ಯಾವುದೇ ಪ್ರಸ್ತಾವ ಇಲ್ಲ' ಎಂದರು.
ರಾಜ್ಯದಲ್ಲಿ ಒಟ್ಟು 4.50 ಕೋಟಿ ಟನ್ ಮರಳಿನ ಅವಶ್ಯಕತೆ ಇದ್ದು, ಇದೀಗ ಕೇವಲ 3.50 ಕೋಟಿ ಟನ್ ಲಭ್ಯವಿದೆ. ಇನ್ನೂ 1 ಕೋಟಿ ಟನ್ ಮರಳಿನ ಕೊರತೆ ಇದ್ದು, ಎಂ-ಸ್ಯಾಂಡ್ ಉತ್ಪಾದನೆ ಇನ್ನೂ ಹೆಚ್ಚಿಸುವ ಅಗತ್ಯವಿದೆ. ಮರಳಿನ ಅಭಾವ ತಪ್ಪಿಸುವ ನಿಟ್ಟಿನಲ್ಲಿ ಅನ್ಯ ಮಾರ್ಗಗಳ ಹುಡುಕಾಟ ನಡೆಸಲಾಗಿದೆ ಎಂದು ವಿವರಣೆ ನೀಡಿದರು.
ಕರಾವಳಿ ಭಾಗದ ಮರಳಿನ ಸಮಸ್ಯೆ ನಿವಾರಣೆಗೆ ಪ್ರತ್ಯೇಕ ನೀತಿ ರೂಪಿಸಬೇಕಿದೆ. ಜೊತೆಗೆ ಹೊಸ ಮರಳು ನೀತಿಗೆ ಇನ್ನೂ ಸಚಿವ ಸಂಪುಟದ ಅನುಮೋದನೆ ಸಿಕ್ಕಿಲ್ಲ. ಜನರಿಗೆ ಸುಲಭವಾಗಿ ಮರಳು ಸಿಗಬೇಕೆಂಬ ದೃಷ್ಟಿಯಿಂದ ಮರಳು ನೀತಿಯನ್ನು ಸರಳವಾಗಿ ಮಾಡಬೇಕೆಂಬುದು ಸರಕಾರ ಉದ್ದೇಶವಾಗಿದೆ. ಆ ನಿಟ್ಟಿನಲ್ಲಿ ಸರಕಾರ ಪ್ರಯತ್ನ ನಡೆಸಿದೆ ಎಂದರು.







