ಭಾರತ-ಚೀನಾ ನಡುವೆ ಒಪ್ಪಂದ ಏರ್ಪಡುವವರೆಗೆ ಗಡಿ ಬಿಕ್ಕಟ್ಟಿನ ಘಟನೆಗಳು ನಡೆಯುತ್ತಿರುತ್ತವೆ: ಜ.ನರವಾಣೆ
ಹೊಸದಿಲ್ಲಿ, ಸೆ.30: ಉಭಯದೇಶಗಳ ನಡುವೆ ಗಡಿ ಒಪ್ಪಂದ ಏರ್ಪಡುವವರೆಗೂ ಭಾರತ ಹಾಗೂ ಚೀನಾ ನಡುವೆ ಗಡಿ ಬಿಕ್ಕಟ್ಟಿನ ಘಟನೆಗಳು ಮುಂದುವರಿಯುತ್ತಲೇ ಇರುತ್ತವೆ ಎಂದು ಸೇನಾ ವರಿಷ್ಠ ಜನರಲ್ ಎಂ.ಎಂ. ನರವಾಣೆ ಗುರುವಾರ ತಿಳಿಸಿದ್ದಾರೆ.
ಪಿಎಚ್ಡಿ ವಾಣಿಜ್ಯ ಹಾಗೂ ಕೈಗಾರಿಕಾ ಒಕ್ಕೂಟದ ಸಭೆಯನ್ನು ಉದ್ದೇಶಿಸಿ ಅವರು ಮಾತಡಿದ ಅವರು ಅಫ್ಘಾನಿಸ್ತಾನದಲ್ಲಿನ ಇತ್ತೀಚಿನ ಬೆಳವಣಿಗೆಗಳು ಖಂಡಿತವಾಗಿಯೂ ಭಾರತೀಯ ಸೇನೆಯ ಗಮನಲ್ಲಿದ್ದು, ಯಾವುದೇ ಗ್ರಹಿಕೆಗೆ ಬರುವ ಯಾವುದೇ ಬೆದರಿಕೆಗಳನ್ನು ಅಂದಾಜಿಸಲಿದೆ ಹಾಗೂ ಆ ಪ್ರಕಾರ ಕಾರ್ಯತಂತ್ರಗಳನ್ನು ರೂಪಿಸಲಿದೆ ಎಂದವರು ಹೇಳಿದ್ದಾರೆ.
ಚೀನಾ ವಿಷಯವದ ಕುರಿತು ವಿವರವಾಗಿ ಸಂವಾದ ನಡೆಸಿದ ಅವರು, ‘‘ನಾವೊಂದು ಅಸಾಧಾರಣವಾದ ಗಡಿ ವಿವಾದವನ್ನು ಹೊಂದಿದ್ದೇವೆ. ಈ ಹಿಂದೆಯೂ ಸಾಬೀತುಪಡಿಸಿದಂತೆ ಯಾವುದೇ ದುಸ್ಸಾಹವನ್ನು ಎದುರಿಸಲು ನಾವು ಸಜ್ಜಾಗಿದ್ದೇವೆ ’’ಎಂದು ನರವಾಣೆ ತಿಳಿಸಿದರು.
ಈ ಬಿಕ್ಕಟ್ಟಿಗೆ ದೀರ್ಘಾವಧಿಯ ಪರಿಹಾರವೊಂದು ದೊರೆಯುವವರೆಗೆ ಇಂತಹ ಘಟನೆಗಳು ಮುಂದುವರಿಯುತ್ತಲೇ ಇರುತ್ತವೆ. ಗಡಿ ಒಪ್ಪಂದದಿಂದ ಉತ್ತರ ಪ್ರಾಂತ (ಚೀನಾ) ಗಡಿಯಲ್ಲಿ ಶಾಶ್ವತ ಶಾಂತಿ ನೆಲೆಸಲಿದೆ ಎಂದರು.
ಅಫ್ಘಾನಿಸ್ತಾನದ ಬಗ್ಗೆ ಪ್ರಸ್ತಾವಿಸಿದ ಅವರು ಭಾರತೀಯ ಸೇನೆ ಅಥವಾ ಸಶಸ್ತ್ರ ಪಡೆಗಳು ಗ್ರಾಹ್ಯ ಬೆದರಿಕೆಗಳನ್ನು ಕಾಲಕಾಲಕ್ಕೆ ಮೌಲ್ಯಮಾಪನ ಮಾಡುತ್ತಲೇ ಇರುತ್ತವೆ ಎಂದರು. ಈ ವೌಲ್ಯಮಾಪನಗಳನ್ನು ಆಧರಿಸಿ ಭಾರತೀಯ ಸೇನೆಯು ಕಾರ್ಯತಂತ್ರವನ್ನು ರೂಪಿಸುತ್ತವೆ ಹಾಗೂ ಭವಿಷ್ಯದ ಬೆದರಿಕೆಗಳನ್ನು ಎದುರಿಸಲು ಇಂತಹ ಸಂಹಿತೆಗಳು ಅಗತ್ಯವಿರುತ್ತವೆ ಎಂದರು.
ಆಗಸ್ಟ್ 15ರಂದು ಕಾಬೂಲ್ ಅನ್ನು ತಾಲಿಬಾನ್ ವಶಪಡಿಸಿಕೊಂಡಿತ್ತು. ಅಫ್ಘಾನಿಸ್ತಾನದ ಆಡಳಿತವನ್ನು ತಾಲಿಬಾನ್ ಕೈಗೆತ್ತಿಕೊಂಡಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದ ಭಾರತವು ಸೆಪ್ಟೆಂಬರ್ 20ರಂದು ಈ ಬಗ್ಗೆ ಹೇಳಿಕೆ ನೀಡಿ, ಆ ದೇಶದ ನೆಲವನ್ನು ಭಯೋತ್ಪಾದಕ ಚಟುವಟಿಕೆಗಳಿಗೆ ಬಳಸಲು ಅವಕಾಶ ನೀಡಬಾರದು ಎಂದು ಆಗ್ರಹಿಸಿತ್ತು.
ಭಯೋತ್ಪಾದಕರಿಂದ ಎದುರಾಗಬಹುದಾದ ಯಾವುದೇ ಬೆದರಿಕೆಗಳನ್ನು ಎದುರಿಸಲು ಭಾರತೀಯ ಸೇನೆ ಸಿದ್ಧವಾಗಿದೆ ಎಂದು ನರವಾಣೆ ತಿಳಿಸಿದರು. ಜಮ್ಮುಕಾಶ್ಮೀರದಲ್ಲಿ ನಾವು ಅತ್ಯಂತ ಕ್ರಿಯಾಶೀಲವಾದ ಬಂಡುಕೋರ ನಿಗ್ರಹ ಹಾಗೂ ಭಯೋತ್ಪಾದಕ ನಿಗ್ರಹ ವ್ಯೂಹವನ್ನು ನಾವು ಹೊಂದಿದ್ದೇವೆ. ನಮ್ಮ ಪಶ್ಚಿಮ ಭಾಗದ ನೆರೆಹೊರೆಯ ರಾಷ್ಟ್ರ (ಪಾಕಿಸ್ತಾನ)ವು ಹೆಚ್ಚಿನ ಸಂಖ್ಯೆಯಲ್ಲಿ ಭಯೋತ್ಪಾದಕರನ್ನು ಗಡಿಯೊಳಗೆ ನುಗ್ಗಿಸಲು ಪ್ರಯತ್ನಿಸುತ್ತಿರುವುದರಿಂದ ಎದುರಾಗಬಹುದಾದ ಬೆದರಿಕೆಯನ್ನು ಆಧರಿಸಿ ಈ ವ್ಯೂಹವನ್ನು ರೂಪಿಲಾಗಿದೆ ಎಂದರು.







