ಸ್ಕೂಲ್ ಸಿಬ್ಬಂದಿಗೆ ಜೀವ ಬೆದರಿಕೆ ಆರೋಪ : ದೂರು
ಮಂಗಳೂರು, ಸೆ.30: ಕ್ಷುಲ್ಲಕ ವಿಚಾರಕ್ಕೆ ಸಂಬಂಧಿಸಿ ಕಣಚೂರು ಪಬ್ಲಿಕ್ ಸ್ಕೂಲ್‌ನ ಸಂಚಾಲಕ ಅಬ್ದುರ್ರಹ್ಮಾನ್ ಮತ್ತು ಮ್ಯಾನೇಜರ್ ಇರ್ಫಾನ್ ಎಂಬವರಿಗೆ ಜೀವ ಬೆದರಿಕೆಯೊಡ್ಡಿದ ಘಟನೆ ದೇರಳಕಟ್ಟೆಯಲ್ಲಿ ನಡೆದಿದ್ದು, ಈ ಬಗ್ಗೆ ಪಬ್ಲಿಕ್ ಸ್ಕೂಲ್‌ನ ಪ್ರಾಂಶುಪಾಲೆ ವಿಮಲಾ ನೀಡಿದ ದೂರಿನಂತೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆಯ ವಿವರ: ಕಣಚೂರು ಪಬ್ಲಿಕ್ ಸ್ಕೂಲ್‌ನ ಇಝಾನ್ ಎಂಬ ವಿದ್ಯಾರ್ಥಿಯ ವರ್ಗಾವಣೆ ಪ್ರಮಾಣ ಪತ್ರ ನೀಡುವಂತೆ ಆತನ ತಾಯಿ ಕಣಚೂರು ಪಬ್ಲಿಕ್ ಸ್ಕೂಲ್‌ಗೆ ಆಗಮಿಸಿದ್ದರು. ಈ ವೇಳೆ ಮ್ಯಾನೇಜರ್ ಇರ್ಫಾನ್ ಶಾಲಾ ಶುಲ್ಕ ಮೊದಲು ಪಾವತಿಸುವಂತೆ ತಿಳಿಸಿದ್ದಾರೆನ್ನಲಾಗಿದೆ. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಪೋಷಕರಾದ ರಮ್ಲತ್ ಸಂಚಾಲಕರ ಕೊಠಡಿಗೆ ಅಕ್ರಮ ಪ್ರವೇಶಗೈದು ನಿಂದಿಸಿದ್ದಾರೆ ಎನ್ನಲಾಗಿದೆ. ಬಳಿಕ ಮುಸ್ತಫ ಎಂಬವರ ಜೊತೆ ಮಾರಕಾಯುಧದೊಂದಿಗೆ ಅಕ್ರಮ ಪ್ರವೇಶ ಮಾಡಿ ಸೆಕ್ಯೂರಿಟಿ ಸಿಬ್ಬಂದಿಯನ್ನು ದೂಡಿ ಹಾಕಿದ್ದು, ಗಾಜುಗಳಿಗೆ ಹಾನಿ ಮಾಡಲು ಪ್ರಯತ್ನಿಸಿದ್ದಾರೆ, ಬಳಿಕ ಅಲ್ಲಿದ್ದ ಕುರ್ಚಿಗಳನ್ನು ಎಸೆದು ಮ್ಯಾನೇಜರ್ ಇರ್ಫಾನ್ ಮತ್ತು ಸಂಚಾಲಕ ಅಬ್ದುರ್ರಹ್ಮಾನ್ ಅವರ ಮೇಲೆ ಹಲ್ಲೆಗೆ ಯತ್ನಿಸಿ, ಕೊಲೆ ಮಾಡುವುದಾಗಿ ಬೆದರಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.





