ಐಪಿಎಲ್ ನಿಂದ ಹಿಂದೆ ಸರಿದ ಕ್ರಿಸ್ ಗೇಲ್

ದುಬೈ: ಪಂಜಾಬ್ ಕಿಂಗ್ಸ್ ಸ್ಟಾರ್ ಆಟಗಾರ ಕ್ರಿಸ್ ಗೇಲ್ ಐಪಿಎಲ್‌ನ ಬಯೋ ಬಬಲ್ ಕಾರಣಕ್ಕೆ ಟೂರ್ನಿಯಿಂದ ಹಿಂದೆ ಸರಿಯಲು ನಿರ್ಧರಿಸಿದ್ದಾರೆ ಎಂದು ಅವರ ತಂಡ ಪಂಜಾಬ್ ಕಿಂಗ್ಸ್ ಗುರುವಾರ ತಿಳಿಸಿದೆ.
ಐಪಿಎಲ್ ಪುನರಾರಂಭದ ನಂತರ ಗೇಲ್ ತಂಡಕ್ಕಾಗಿ ಕೇವಲ ಎರಡು ಪಂದ್ಯಗಳನ್ನು ಆಡಿದ್ದರು ಹಾಗೂ ಮುಂದಿನ ತಿಂಗಳು ಆರಂಭವಾಗಲಿರುವ ಟಿ 20 ವಿಶ್ವಕಪ್ ಮೊದಲು ರಿಫ್ರೆಶ್ ಆಗಲು ಬಯಸಿದ್ದಾರೆ.
"ನಾನು ಕಳೆದ ಕೆಲವು ತಿಂಗಳುಗಳಲ್ಲಿ ಸಿಡಬ್ಲ್ಯೂಐ ಬಬಲ್, ಸಿಪಿಎಲ್ ಬಬಲ್ ನಂತರ ಐಪಿಎಲ್ ಬಬಲ್‌ನ ಭಾಗವಾಗಿದ್ದೇನೆ ಹಾಗೂ ಮಾನಸಿಕವಾಗಿ ರೀಚಾರ್ಜ್ ಮಾಡಲು ಹಾಗೂ ನನ್ನನ್ನು ರಿಫ್ರೆಶ್ ಮಾಡಲು ಬಯಸುತ್ತೇನೆ "ಎಂದು ಗೇಲ್ ಪಂಜಾಬ್ ಕಿಂಗ್ಸ್ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.
"ನಾನು ಟಿ-20 ವಿಶ್ವಕಪ್‌ನಲ್ಲಿ ವೆಸ್ಟ್ ಇಂಡೀಸ್‌ಗೆ ಸಹಾಯ ಮಾಡುವತ್ತ ಗಮನ ಹರಿಸಲು ಬಯಸುತ್ತೇನೆ ಮತ್ತು ದುಬೈನಲ್ಲಿ ವಿರಾಮ ತೆಗೆದುಕೊಳ್ಳಲು ಬಯಸುತ್ತೇನೆ. ನನಗೆ ಸಮಯ ನೀಡಿದ ಪಂಜಾಬ್ ಕಿಂಗ್ಸ್‌ಗೆ ನನ್ನ ಧನ್ಯವಾದಗಳು. ನನ್ನ ಶುಭಾಶಯಗಳು ಮತ್ತು ಭರವಸೆಗಳು ಯಾವಾಗಲೂ ತಂಡದೊಂದಿಗೆ ಇರುತ್ತವೆ’’ ಎಂದು ಗೇಲ್ ಹೇಳಿದ್ದಾರೆ.
ಕ್ರಿಸ್ ಗೇಲ್ ಅವರ ನಿರ್ಧಾರವನ್ನು ತಂಡ ಗೌರವಿಸುತ್ತದೆ ಎಂದು ಮುಖ್ಯ ಕೋಚ್ ಅನಿಲ್ ಕುಂಬ್ಳೆ ಹೇಳಿದ್ದಾರೆ.
"ನಾನು ಕ್ರಿಸ್ ವಿರುದ್ಧ ಆಡಿದ್ದೇನೆ ಹಾಗೂ ಪಂಜಾಬ್ ಕಿಂಗ್ಸ್‌ನಲ್ಲಿ ಅವರಿಗೆ ತರಬೇತಿ ನೀಡಿದ್ದೇನೆ ಮತ್ತು ನಾನು ತಿಳಿದಿರುವಂತೆ ಅವರು ಯಾವಾಗಲೂ ಸಂಪೂರ್ಣ ವೃತ್ತಿಪರರಾಗಿದ್ದಾರೆ. ಒಂದು ತಂಡವಾಗಿ ನಾವು ಅವರ ನಿರ್ಧಾರವನ್ನು ಹಾಗೂ ಟಿ 20 ವಿಶ್ವಕಪ್‌ಗೆ ತನ್ನನ್ನು ಸಿದ್ಧಪಡಿಸುವ ಆಸೆಯನ್ನು ಗೌರವಿಸುತ್ತೇವೆ"ಎಂದು ಕುಂಬ್ಳೆ ಹೇಳಿದರು.







