ಸಿದ್ದೀಖ್ ಕಪ್ಪನ್ ತಮ್ಮ ಲೇಖನಗಳ ಮೂಲಕ ಮುಸ್ಲಿಮರನ್ನು ಪ್ರಚೋದಿಸುತ್ತಿದ್ದರು: ಚಾರ್ಜ್ಶೀಟ್ ನಲ್ಲಿ ಉಲ್ಲೇಖ

Photo: Twitter/@vssanakan
ಲಕ್ನೋ : ಕಳೆದ ವರ್ಷದ ಅಕ್ಟೋಬರ್ ತಿಂಗಳಿನಲ್ಲಿ ಹತ್ರಸ್ ಸಾಮೂಹಿಕ ಅತ್ಯಾಚಾರ ಘಟನೆ ಸಂಬಂಧ ವರದಿ ಮಾಡಲು ತೆರಳುತ್ತಿದ್ದಾಗ ಬಂಧನಕ್ಕೊಳಗಾಗಿ ಅಕ್ರಮ ಚಟುವಟಿಕೆಗಳ ನಿಯಂತ್ರಣ ಕಾಯಿದೆ ಹೇರಲ್ಪಟ್ಟಿರುವ ಕೇರಳ ಮೂಲದ ಪತ್ರಕರ್ತ ಸಿದ್ದೀಖ್ ಕಪ್ಪನ್ ಪ್ರಕರಣ ಸಂಬಂಧ 5,000 ಪುಟಗಳ ದೋಷಾರೋಪ ಪಟ್ಟಿ ಸಲ್ಲಿಸಿರುವ ಉತ್ತರ ಪ್ರದೇಶ ವಿಶೇಷ ಕಾರ್ಯಪಡೆ, ಕಪ್ಪನ್ ಅವರು ಒಬ್ಬ ʼಜವಾಬ್ದಾರಿಯುತ' ಪತ್ರಕರ್ತನಾಗಿ ಬರೆಯಲಿಲ್ಲ ಮತ್ತು ಅವರು ಮುಸ್ಲಿಮರನ್ನು ಪ್ರಚೋದಿಸಲು ವರದಿ ಮಾಡುತ್ತಾರೆ ಹಾಗೂ ಮಾವೋವಾದಿಗಳು ಮತ್ತು ಕಮ್ಯುನಿಸ್ಟರ ಬಗ್ಗೆ ಅನುಕಂಪ ಹೊಂದಿದ್ದಾರೆ ಎಂದು ಹೇಳಿದೆ.
ನಿಝಾಮುದ್ದೀನ್ ಮರ್ಕಝ್, ಸಿಎಎ ವಿರೋಧಿ ಪ್ರತಿಭಟನೆಗಳು, ಈಶಾನ್ಯ ದಿಲ್ಲಿ ಹಿಂಸಾಚಾರ, ಅಯ್ಯೋಧ್ಯೆ ರಾಮ ಮಂದಿರ ಹಾಗೂ ಶರ್ಜೀಲ್ ಇಮಾಮ್ ವಿರುದ್ಧದ ಚಾರ್ಜ್ಶೀಟ್ಗೆ ಸಂಬಂಧಿಸಿದಂತೆ ಮಲಯಾಳಂ ಸುದ್ದಿ ಸಂಸ್ಥೆಗಾಗಿ ಅವರು ಬರೆದಿದ್ದ 36 ಲೇಖನಗಳನ್ನೂ ದೋಷಾರೋಪದಲ್ಲಿ ಉಲ್ಲೇಖಿಸಲಾಗಿದೆ. ಕಪ್ಪನ್ ಅವರ ಲ್ಯಾಪ್ಟಾಪ್ನಿಂದ ಈ ಮಾಹಿತಿ ದೊರಕಿದೆ ಎಂದು ಅದರಲ್ಲಿ ಬರೆಯಲಾಗಿದೆ.
ಹತ್ರಸ್ ಘಟನೆಯನ್ನು ಮುಂದಿಟ್ಟುಕೊಂಡು ನ್ಯಾಯಕ್ಕಾಗಿ ಆಗ್ರಹಿಸಿ ಅಶಾಂತಿ ಸೃಷ್ಟಿಸುವ ಉದ್ದೇಶವನ್ನು ಪಿಎಫ್ಐ ಇಟ್ಟುಕೊಂಡಿತ್ತು ಹಾಗೂ ಕಪ್ಪನ್ ಅವರು ಈ ಸಂಘಟನೆಯ ʼಥಿಂಕ್ ಟ್ಯಾಂಕ್' ಆಗಿ ಕೆಲಸ ಮಾಡುತ್ತಿದ್ದರು, ಅವರು ಮಲಯಾಳಂ ಮಾಧ್ಯಮದಲ್ಲಿ ಹಿಂದು ವಿರೋಧಿ ವರದಿಗಳನ್ನು ಪ್ರಕಟಿಸಲು ಯತ್ನಿಸುತ್ತಿದ್ದರು ಎಂದು ಚಾರ್ಜ್ಶೀಟ್ನಲ್ಲಿ ಆರೋಪಿಸಲಾಗಿದೆ, ತಮ್ಮ ಬರಹಗಳಲ್ಲಿ ಅವರು ನಿಷೇಧಿತ ಸಂಘಟನೆ ಸಿಮಿ ಯಾವುದೇ ಉಗ್ರ ಚಟುವಟಿಕೆಯಲ್ಲಿ ತೊಡಗಿಲ್ಲ ಎಂದು ಬಿಂಬಿಸುವ ಯತ್ನ ನಡೆಸಿದ್ದಾರೆ ಎಂದೂ ಚಾರ್ಜ್ ಶೀಟ್ ನಲ್ಲಿ ಬರೆಯಲಾಗಿದೆ.
ಈ ಚಾರ್ಜ್ ಶೀಟ್ ಅನ್ನು ಈ ವರ್ಷದ ಎಪ್ರಿಲ್ ತಿಂಗಳಿನಲ್ಲಿ ಸಲ್ಲಿಸಲಾಗಿತ್ತೆಂದು ತಿಳಿದು ಬಂದಿದೆ.