ಪ್ರಧಾನಿ ಭೇಟಿಯಾಗಿ ಕೃಷಿ ಕಾನೂನುಗಳನ್ನು ಹಿಂಪಡೆಯುವಂತೆ ಒತ್ತಾಯಿಸಿದ ಪಂಜಾಬ್ ಮುಖ್ಯಮಂತ್ರಿ ಚನ್ನಿ
photo: Twitter/PMO
ಹೊಸದಿಲ್ಲಿ: ಪಂಜಾಬ್ ಮುಖ್ಯಮಂತ್ರಿಯಾದ ನಂತರ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರೊಂದಿಗಿನ ತನ್ನ ಮೊದಲ ಭೇಟಿಯಲ್ಲಿ ಚರಣ್ ಜೀತ್ ಸಿಂಗ್ ಚನ್ನಿ ಅವರು ಕೇಂದ್ರಕ್ಕೆ ಮೂರು ವಿವಾದಾತ್ಮಕ ಕೃಷಿ ಕಾನೂನುಗಳನ್ನು ಹಿಂಪಡೆಯುವಂತೆ ಕೇಳಿಕೊಂಡರು.
ಈ ಕಾಯ್ದೆಯ ವಿರುದ್ಧ ಹೆಚ್ಚಾಗಿ ಪಂಜಾಬ್ ಮತ್ತು ಹರಿಯಾಣದ ಸಾವಿರಾರು ರೈತರು ಸುಮಾರು ಒಂದು ವರ್ಷದಿಂದ ಪ್ರತಿಭಟನೆ ನಡೆಸುತ್ತಿದ್ದಾರೆ.
ಕ್ಯಾಪ್ಟನ್ ಅಮರೀಂದರ್ ಸಿಂಗ್ ರಾಜೀನಾಮೆಯಿಂದ ತೆರವಾಗಿರುವ ಸ್ಥಾನಕ್ಕೆ ಆಯ್ಕೆಯಾಗಿರುವ ಚನ್ನಿ, ಪ್ರಧಾನವಾಗಿ ಪ್ರಧಾನಮಂತ್ರಿಯವರಲ್ಲಿ ಹೆಚ್ಚಿನ ಕೃಷಿ ರಾಜ್ಯದಲ್ಲಿ ಭತ್ತ ಸಂಗ್ರಹಣೆಯನ್ನು ಮುಂದೂಡುವ ಕೇಂದ್ರದ ನಿರ್ಧಾರವನ್ನು ಹಿಂಪಡೆಯುವಂತೆ ಕೋರಿದರು.
"ಕೃಷಿ ನಮ್ಮ ಆದಾಯದ ಪ್ರಮುಖ ಮೂಲವಾಗಿದೆ. ಮೂರು ವಿವಾದಾತ್ಮಕ ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟಿಸುತ್ತಿರುವ ರೈತರಿಗೆ ಸೂಕ್ತ ಪರಿಹಾರವನ್ನು ಕಂಡುಕೊಳ್ಳಲು ನೆರವಾಗುವಂತೆ ನಾನು ಪ್ರಧಾನಮಂತ್ರಿಯವರನ್ನು ಕೇಳಿಕೊಂಡಿದ್ದೇನೆ'' ಎಂದು ಸಭೆಯ ಬಳಿಕ ಸುದ್ದಿಗಾರರಿಗೆ ಚನ್ನಿ ತಿಳಿಸಿದರು.
ಕರ್ತಾರ್ಪುರ್ ಕಾರಿಡಾರ್ ಅನ್ನು ಮತ್ತೆ ತೆರೆಯಲು ಪ್ರಧಾನಿಯವರನ್ನು ಚೆನ್ನಿ ಒತ್ತಾಯಿಸಿದರು. ಕೊರೋನ ಕಾರಣಕ್ಕೆ ಕಾರಿಡಾರ್ ಅನ್ನು ಮುಚ್ಚಲಾಗಿದೆ.