ರಾಜಭಾಷಾ ಆಯೋಗದ ಅಧ್ಯಕ್ಷ ಶಿವಶಂಕರರಾವ್ ನಿಧನ
ಬೆಂಗಳೂರು, ಅ.1: ಭಾಷಾಂತರ ನಿರ್ದೇಶನಾಲಯದ ರಾಜಭಾಷಾ (ವಿಧಾಯಿ) ಆಯೋಗದ ಅಧ್ಯಕ್ಷರೂ ಆದ ಧಾರ್ಮಿಕ ದತ್ತಿ ಇಲಾಖೆಯ ಜುಡಿಷಿಯಲ್ ವಿಭಾಗದ ಮುಖ್ಯಸ್ಥ ಮಹಿಪಾಲರಾವ್ ಶಿವಶಂಕರರಾವ್ ದೇಸಾಯಿ(77) ನಿಧನರಾಗಿದ್ದಾರೆ.
ಶುಕ್ರವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರ ಅಂತ್ಯಕ್ರಿಯೆಯನ್ನು ಹುಟ್ಟೂರಾದ ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕಿನ ಚಿಕ್ಕಮ್ಯಾಗೇರಿ ಗ್ರಾಮದಲ್ಲಿ ನಡೆಸುವುದಾಗಿ ಕುಟುಂಬದ ಮೂಲಗಳು ತಿಳಿಸಿವೆ.
ಮೂಲತಃ ಕೊಪ್ಪಳ ಜಿಲ್ಲೆಯವರಾದ ಮಹಿಪಾಲರಾವ್ ದೇಸಾಯಿ 1978ರಲ್ಲಿ ಮುನ್ಸಿಫ್ ಆಗಿ ನೇಮಕಗೊಂಡು, ನಂತರ ಜಿಲ್ಲಾ ನ್ಯಾಯಾಧೀಶರಾಗಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಸೇವೆ ಸಲ್ಲಿಸಿದ್ದರು. ಬಳಿಕ ಲೋಕಾಯುಕ್ತದಲ್ಲಿಯೂ ಕೆಲ ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು.
ಇತ್ತೀಚೆಗೆ ಇವರನ್ನು ಧಾರ್ಮಿಕ ದತ್ತಿ ಇಲಾಖೆಯ ಜುಡಿಷಿಯಲ್ ವಿಭಾಗದ ಮುಖ್ಯಸ್ಥರಾಗಿ ಮತ್ತು ಭಾಷಾಂತರ ನಿರ್ದೇಶನಾಲಯದ ರಾಜಭಾಷಾ (ವಿಧಾಯಿ) ಆಯೋಗದ ಅಧ್ಯಕ್ಷರಾಗಿ ನಿಯೋಜಿಸಲಾಗಿತ್ತು.
ಸಾಹಿತ್ಯದಲ್ಲಿ ಆಸಕ್ತಿ ಹೊಂದಿದ್ದ ಮಹಿಪಾಲರಾವ್ ದೇಸಾಯಿ ಭಾಷಾಂತರದಲ್ಲಿ ಪರಿಣಿತರಾಗಿದ್ದರು. ರಾಷ್ಟ್ರಕವಿ ರವೀಂದ್ರನಾಥ ಠ್ಯಾಗೋರ್ ಅವರ ಗೀತಾಂಜಲಿ ಪುಸ್ತಕವನ್ನು ಕನ್ನಡಕ್ಕೆ ಅನುವಾದ ಮಾಡಿದ್ದರು.





