ಬಗರ್ ಹುಕುಂ ಸಾಗುವಳಿ ಚೀಟಿ ನೀಡುವ ವಿಚಾರ; ಪ್ರಭಾವಿಗಳ ಒತ್ತಡಕ್ಕೆ ಮಣಿಯಬೇಡಿ: ಅಧಿಕಾರಿಗಳಿಗೆ ಡಿ.ಕೆ.ಶಿ ಸೂಚನೆ

ಬೆಂಗಳೂರು, ಅ. 1: `ಪ್ರಭಾವಿಗಳ ಒತ್ತಡಕ್ಕೆ, ಶಿಫಾರಸ್ಸುಗಳಿಗೆ ಮಣಿದು ಬಗರ್ ಹುಕುಂ ಸಾಗುವಳಿ ಚೀಟಿ ನೀಡಬಾರದು. ಸಾಗುವಳಿ ಅರ್ಜಿ ಹಾಕಿರುವವರ ಜಮೀನಿನ ಸಮೀಕ್ಷೆ ನಡೆಸಿ, ಅರ್ಹ ಫಲಾನುಭವಿಗಳಿಗೆ ಮಾತ್ರ ಭೂಮಿ ಮಂಜೂರು ಮಾಡಬೇಕು' ಎಂದು ತಾಲೂಕು ಬಗರ್ ಹುಕುಂ ಸಾಗುವಳಿ ಸಮಿತಿ ಅಧ್ಯಕ್ಷರೂ ಆಗಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಶುಕ್ರವಾರ ಕನಕಪುರ ತಾಲೂಕು ಕಚೇರಿ ಸಭಾಂಗಣದಲ್ಲಿ ಬಗರ್ ಹುಕುಂ ಸಾಗುವಳಿ ಸಮಿತಿ ಸಭೆ ನಡೆಸಿದ ಅವರು, ಅರ್ಹರಿದ್ದು, ಬಗರ್ ಹುಕುಂ ಸಾಗುವಳಿ ಮಾಡುತ್ತಿರುವ ಬಡವರಿಗೆ ಭೂಮಿ ಮಂಜೂರು ಮಾಡಲು ಸರಕಾರ ಕ್ರಮ ವಹಿಸಬೇಕು. ಅಧಿಕಾರಿಗಳು ಸಾಗುವಳಿ ಮಾಡುತ್ತಿರುವವರ ಜಮೀನು ಪರಿಶೀಲಿಸಿ ಸಾಗುವಳಿ ಚೀಟಿ ನೀಡಬೇಕು ಎಂದು ಸಲಹೆ ಮಾಡಿದರು.
ಸಮಿತಿ ಸದಸ್ಯರಾದ ರವಿಕುಮಾರ್, ಮುತ್ತುರಾಜ್, ಶಶಿಕಲಾ ಭೈರೇಗೌಡ, ತಹಶೀಲ್ದಾರ್ ವಿ.ಆರ್.ವಿಶ್ವನಾಥ್, ತಾಲೂಕು ಪಂಚಾಯಿತಿ ಸಿಇಒ ಎಲ್.ಮಧು, ಲೋಕೋಪಯೋಗಿ ಎಇಇ ಮೂರ್ತಿ, ನಗರಸಭೆ ಆಯುಕ್ತ ಟಿ.ವಿ.ರಾಘವೇಂದ್ರ ಸೇರಿದಂತೆ ಇನ್ನಿತರ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.





