ಅ.3ರಂದು ಬಿಜೆಪಿಯಿಂದ ಉಡುಪಿ ಜಿಲ್ಲೆಯಾದ್ಯಂತ ಗರಿಷ್ಠ ಸೇವಾ ಚಟುವಟಿಕೆ
ಉಡುಪಿ, ಅ.1: ಉಡುಪಿ ಜಿಲ್ಲಾ ಬಿಜೆಪಿ ವತಿಯಿಂದ ಸೇವೆ ಮತ್ತು ಸಮರ್ಪಣಾ ಅಭಿಯಾನದ ಅಂಗವಾಗಿ ಗಾಂಧಿ ಜಯಂತಿ ಆಚರಣೆಯ ಪ್ರಯುಕ್ತ ಅ.2ರಂದು ಜಿಲ್ಲೆಯಾದ್ಯಂತ ಗರಿಷ್ಠ ಸೇವಾ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿವೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ತಿಳಿಸಿದ್ದಾರೆ.
ಬಿಜೆಪಿ ಜಿಲ್ಲಾ ಕಛೇರಿಯಲ್ಲಿಂದು ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅ.2ರಂದು ಬೆಳಗ್ಗೆ 9ಗಂಟೆಗೆ ಕಣ್ಣಿನ ಉಚಿತ ತಪಾಸಣೆ, ಉಚಿತ ಶಸ್ತ್ರ ಚಿಕಿತ್ಸೆ, ನೇತ್ರದಾನ ನೋಂದಣಿ, ಕನ್ನಡಕ ವಿತರಣೆ ಕಾರ್ಯಕ್ರಮವು ಹಿರಿಯಡ್ಕ ದೇವಾಡಿಗರ ಸಭಾ ಭವನದಲ್ಲಿ ಮತ್ತು ಅ.3ರಂದು ಬೆಳಗ್ಗೆ 9ಗಂಟೆಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವು ಹಿರಿಯಡ್ಕ ದೇವಾಡಿಗರ ಸಭಾಭವನದಲ್ಲಿ ನಡೆಯಲಿದೆ ಎಂದರು.
ಅ.2ರಂದು ಜಿಲ್ಲೆಯ ವಿವಿಧ ಮಂಡಲಗಳ ವ್ಯಾಪ್ತಿಯಲ್ಲಿ ನಡೆಯಲಿರುವ ವಿಶೇಷ ಸೇವಾ ಚಟುವಟಿಕೆಗಳು ನಡೆಯಲಿವೆ. ಕೇಂದ್ರ ಸರಕಾರದ ಇ-ಶ್ರಮ ಯೋಜನೆ ನೋಂದಣಿ ಶಿಬಿರ, ಮಲ್ಪೆಬೀಚ್ ಸ್ವಚ್ಛತಾ ಅಭಿಯಾನ, ಬೂತ್ ಗಳಲ್ಲಿ ಗಾಂಧಿ ಜಯಂತಿ ಆಚರಣೆ ಮತ್ತು ಸ್ವಚ್ಛತಾ ಅಭಿಯಾನ, ಕೋವಿಡ್ ಲಸಿಕೆ ವಿತರಣೆ, ಖಾದಿ ಮೇಳ, ನೀಲಾವರ ಗೋಶಾಲೆಯಲ್ಲಿ ಗೋಪೂಜೆ, ಅನಾಥಾಶ್ರಮಕ್ಕೆ ಧನ ಸಹಾಯ ಸೇರಿದಂತೆ ವಿವಿಧ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಉಡುಪಿ ನಗರಾಧ್ಯಕ್ಷ ಮಹೇಶ್ ಠಾಕೂರ್, ಜಿಲ್ಲಾ ವಕ್ತಾರ ಗುರುಪ್ರಸಾದ್ ಶೆಟ್ಟಿ, ಸಹ ವಕ್ತಾರ ಶಿವಕುಮಾರ್ ಅಂಬಲಪಾಡಿ, ಶ್ರೀನಿಧಿ ಹೆಗ್ಡೆ ಹಿರೇಬೆಟ್ಟು, ಸತ್ಯಾನಂದ ನಾಯಕ್, ವೀಣಾ ಎಸ್.ಶೆಟ್ಟಿ, ದಾವೂದ್ ಅಬೂಬಕ್ಕರ್ ಉಪಸ್ಥಿತರಿದ್ದರು.







