ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ವಿವಾದಾತ್ಮಕ ಹೇಳಿಕೆ; ಸಂಜಯ್ ಪಾಟೀಲ್ ಬಂಧಿಸುವಂತೆ ಮಹಿಳಾ ಕಾಂಗ್ರೆಸ್ ಒತ್ತಾಯ

ಬೆಂಗಳೂರು, ಅ.1: ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ಬಿಜೆಪಿ ಮಾಜಿ ಶಾಸಕ ಸಂಜಯ್ ಪಾಟೀಲ್‍ರನ್ನು ಬಂಧಿಸುವಂತೆ ಒತ್ತಾಯಿಸಿ ಮಹಿಳಾ ಕಾಂಗ್ರೆಸ್ ಸದಸ್ಯರು ಪ್ರತಿಭಟನೆ ನಡೆಸಿದರು.
ಶುಕ್ರವಾರ ನಗರದ ಮೌರ್ಯ ವೃತ್ತದ ಗಾಂಧಿ ಪ್ರತಿಮೆ ಎದುರು ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ನೇತೃತ್ವದಲ್ಲಿ ಜಮಾಯಿಸಿದ ಹೋರಾಟಗಾರರು, ಬಿಜೆಪಿ ನಾಯಕರು ಮಹಿಳೆಯರ ಮೇಲೆ ಗೌರವ ಹೊಂದಿಲ್ಲ ಎಂದು ಆರೋಪಿಸಿದರು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಬಿಬಿಎಂಪಿ ಮಾಜಿ ಮೇಯರ್ ಜಿ.ಪದ್ಮಾವತಿ, ದೇಶಭಕ್ತಿ, ಸಂಸ್ಕೃತಿ ಎಂಬ ಬಡಾಯಿ ಕೊಚ್ಚಿಕೊಳ್ಳುವ ಬಿಜೆಪಿ ನಾಯಕರಿಗೆ ಮಹಿಳೆಯರಿಗೆ ಗೌರವ ಕೊಟ್ಟು ಮಾತನಾಡಬೇಕೆಂದು ತಿಳಿದಿಲ್ಲವೇ ಎಂದು ವಾಗ್ದಾಳಿ ನಡೆಸಿದರು.
ರಾಷ್ಟ್ರಪಿತ ಮಹಾತ್ಮಗಾಂಧಿ ಅವರು ಮಹಿಳೆಯರು ಒಂಟಿಯಾಗಿ ಮಧ್ಯರಾತ್ರಿ ಓಡಾಡಿದರೆ ಆಗ ದೇಶಕ್ಕೆ ಸ್ವಾತಂತ್ರ್ಯ ಬಂದಂತೆ ಎಂದು ಹೇಳಿದ್ದರು. ಆದರೆ, ಇಂದು ಬಿಜೆಪಿ ಪಕ್ಷದಲ್ಲಿ ಹಲವಾರು ರಾಜಕಾರಣಿಗಳು ಅತ್ಯಾಚಾರ, ಮಾನಹಾನಿ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ ಎಂದು ದೂರಿದರು.
ಈ ಸಂದರ್ಭದಲ್ಲಿ ಬೆಂಗಳೂರು ಉತ್ತರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ವಿಮಲಾ ವೆಂಕಟ್, ಉಮಾಬಾಯಿ, ಸಲ್ಮಾ ತಾಜ್ ಸೇರಿದಂತೆ ಪ್ರಮುಖರಿದ್ದರು.





