'ನಮ್ಮ ಉಡುಪಿ-ಸ್ವಚ್ಛ ಉಡುಪಿ' ಸಂಕಲ್ಪ ಮಾಡಿ: ಯುವಜನತೆಗೆ ಡಿಸಿ ಕೂರ್ಮಾರಾವ್ ಕರೆ

ಉಡುಪಿ, ಅ.1: ರಾಷ್ಟ್ರಪಿತ ಮಹಾತ್ಮ ಗಾಂಧಿಜಿ ಅವರ ಅತ್ಯಂತ ಪ್ರೀತಿಪಾತ್ರ ಕೆಲಸ ಸ್ವಚ್ಛತೆ. ಅದೇ ರೀತಿ ಉಡುಪಿ ಜಿಲ್ಲೆಯನ್ನು ಅತ್ಯಂತ ಸ್ವಚ್ಚ ಜಿಲ್ಲೆಯನ್ನಾಗಿ ಮಾಡಲು ಸಂಕಲ್ಪ ಮಾಡುವಂತೆ ಯುವಜನತೆಗೆ, ಎನ್‌ಸಿಸಿ, ಎನ್ನೆಸ್ಸೆಸ್ ವಿದ್ಯಾರ್ಥಿಗಳಿಗೆ ಹಾಗೂ ವಿವಿಧ ಸಂಘಟನೆಗಳಿಗೆ ಜಿಲ್ಲಾಧಿಕಾರಿ ಕೂರ್ಮ ರಾವ್ ಎಂ. ಕರೆ ನೀಡಿದ್ದಾರೆ.
ಶುಕ್ರವಾರ ಎಂಜಿಎಂ ಕಾಲೇಜಿನ ಆವರಣದಲ್ಲಿ ಕ್ಲೀನ್ ಇಂಡಿಯಾ ಕಾರ್ಯಕ್ರಮದ ಅಂಗವಾಗಿ ಕಸ ಕೊಂಡೊಯ್ಯುವ ಸ್ವಚ್ಛ ವಾಹಿನಿ ವಾಹನಕ್ಕೆ ಹಸಿರು ನಿಶಾನೆ ತೋರಿಸಿ, ವಿದ್ಯಾರ್ಥಿಗಳಿಗೆ ಹೆಕ್ಕಿದ ಪ್ಲಾಸ್ಟಿಕ್ ಕಸವನ್ನು ತುಂಬಿಸಲು ಚೀಲಗಳನ್ನು ವಿತರಿಸಿ ಅವರು ಮಾತನಾಡುತಿದ್ದರು.
ರಾಷ್ಟ್ರ ಮಟ್ಟದಲ್ಲಿ ಅಕ್ಟೋಬರ್ 1ರಿಂದ 31ರವರೆಗೆ ಒಂದು ತಿಂಗಳ ಕಾಲ ನಡೆಯುವ ಕ್ಲೀನ್ ಇಂಡಿಯಾ ಕಾರ್ಯಕ್ರಮ ಇದಾಗಿದ್ದು, ಭಾರತ ಸರಕಾರದ ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವಾಲದ ನೇತೃತ್ವದಲ್ಲಿ ನೆಹರು ಯುವ ಕೇಂದ್ರದ ಸಂಯೋಜನೆಯೊಂದಿಗೆ, ಮನೆಯಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಒಂದು ಬಾರಿ ಬಳಸಿ ಎಸೆದ ಪ್ಲಾಸ್ಟಿಕ್‌ಗಳನ್ನು ಹೆಕ್ಕಿ, ಹೆಕ್ಕಿದ ಪ್ಲಾಸ್ಟಿಕ್ ತ್ಯಾಜ್ಯವನ್ನು ತೂಕ ನೋಡಿ ಆಯಾ ಸ್ಥಳೀಯ ಸರಕಾರ, ಗ್ರಾಮ ಪಂಚಾಯತ್ ಅಥವಾ ನಗರಸಭಾ ಎಸ್‌ಎಲ್‌ಆರ್‌ಎಮ್/ಸ್ವಚ್ಛ ಸಂಕೀರ್ಣ ಕೇಂದ್ರಗಳಿಗೆ ಅವುಗಳ್ನು ಹಸ್ತಾಂತರಿಸುವಂತೆ ತಿಳಿಸಿದರು.
ಕ್ಲೀನ್ ಇಂಡಿಯಾ ಅಭಿಯಾನವನ್ನು ಗ್ರಾಮ ಮಟ್ಟದಿಂದ ತಾಲೂಕು, ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರ ಮಟ್ಟದವರೆಗೆ ಹಮ್ಮಿಕೊಂಡಿದ್ದು,ಉಡುಪಿ ಜಿಲ್ಲಾ ಮಟ್ಟದಲ್ಲಿ ಈ ಅಭಿಯಾನವನ್ನು ಯಶಸ್ವಿಗೊಳಿಸುವಲ್ಲಿ ಉಡುಪಿ ಜಿಲ್ಲಾಡಳಿತದೊಂದಿಗೆ ಉಡುಪಿ ನಗರಸಭೆ, ಎನ್ನೆಸ್ಸೆಸ್, ಎನ್‌ಸಿಸಿ, ಸ್ಕೌಟ್ಸ್ ಎಂಡ್ ಗೈಡ್ಸ್, ರೋವರ್ಸ್ ಎಂಡ್ ರೇಂಜರ್ಸ್, ಜಿಲ್ಲೆಯಾದ್ಯಂತ ಇರುವ ಯುವಕ-ಯುವತಿ ಮಂಡಲಗಳು, ಸ್ವಸಹಾಯ ಸಂಘಗಳ ಸದಸ್ಯರು ಇದರಲ್ಲಿ ಸಕ್ರಿಯವಾಗಿ ಭಾಗವಹಿಸಿ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ನಡೆಸಲು ಸಕರಿ ಸುವಂತೆ ಮನವಿ ಮಾಡಿದರು.
ಇಂದಿನ ಕಾರ್ಯಕ್ರಮದಲ್ಲಿ 200ಕ್ಕೂ ಅಧಿಕ ಯುವಕ ಯುವತಿಯರು ಭಾಗವಹಿಸಿದ್ದು, ಮುಂದಿನ ಒಂದು ತಿಂಗಳ ಅವಧಿಯಲ್ಲಿ ನಡೆಯುವ ಈ ಅಭಿಯಾನದಲ್ಲಿ,ಜಿಲ್ಲೆಯ ಹಲವಾರು ಸಮಾಜಮುಖಿ ಕೆಲಸಗಳಲ್ಲಿ ಈಗಾಗಲೇ ತೊಡಗಿಸಿಕೊಂಡಿರುವ ಅತ್ಯಂತ ಕ್ರಿಯಾಶೀಲ ಸಂಘಟನೆಗಳಾದ ಲಯನ್ಸ್ ಕ್ಲಬ್, ರೋಟರಿ ಕ್ಲಬ್, ಜೆಸಿಐ, ಇಂಡಿಯನ್ ಸೀನಿಯರ್ ಸಿಟಿಜನ್, ಸ್ವಚ್ಛ ಭಾರತ್ ಪ್ರೆಂಡ್ಸ್, ಭಾರತೀಯ ವಿಕಾಸ ಟ್ರಸ್ಟ್ ಹಾಗೂ ಇನ್ನಿತರ ಸಂಘಟನೆಗಳು ಭಾಗವಹಿಸಲಿವೆ.
ಕ್ಲೀನ್ ಇಂಡಿಯಾದ ಜಿಲ್ಲಾ ನೋಡಲ್ ಅಧಿಕಾರಿಯಾಗಿರುವ ಜಿಪಂನ ಯೋಜನಾಧಿಕಾರಿ ಶ್ರೀನಿವಾಸ ರಾವ್, ಉಡುಪಿ ನಗರಸಭೆಯ ಪೌರಾಯುಕ್ತ ಡಾ.ಉದಯ್ ಶೆಟ್ಟಿ, ಲೀಡ್ ಕೆನರಾ ಬ್ಯಾಂಕ್ ಮ್ಯಾನೇಜರ್ ಪೀರ್‌ಸಾಬ್ ಪಿಂಜರ್, ಎಂಜಿಎಂ ಕಾಲೇಜಿನ ಪ್ರಾಂಶುಪಾಲ್ ಡಾ.ದೇವಿದಾಸ್ ನಾಯಕ್, ಸ್ವಚ್ಛ ಭಾರತ್ ಪ್ರೆಂಡ್ಸ್‌ನ ಗಣೇಶ್ ನಾಯಕ್, ರಾಘವೇಂದ್ರ ಕರ್ವಾಲೊ, ಬಿವಿಟಿ ಸಂಸ್ಥೆಯ ಸಿಇಒ ಮನೋಹರ್ ಮತ್ತಿತರರು ಉಪಸ್ಥಿತರಿದ್ದರು.
ಮಣಿಪಾಲ ನೆಹರು ಯುವ ಕೇಂದ್ರದ ಜಿಲ್ಲಾ ಯುವಜನ ಅಧಿಕಾರಿ ಹಾಗೂ ಕಾರ್ಯಕ್ರಮದ ಮುಖ್ಯ ಸಂಯೋಜಕ ವಿಲ್‌ಫ್ರೆಡ್ ಡಿಸೋಜ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಜಲಶಕ್ತಿ ಹಾಗೂ ಸ್ವಚ್ಛ ಭಾರತ್ ರಾಜ್ಯ ಮಟ್ಟದ ಸಂಪನ್ಮೂಲ ವ್ಯಕ್ತಿ ಜೋಸೆಫ್ ಜಿ ಎಂ ರೆಬೆಲ್ಲೊ ವಂದಿಸಿದರು.









.jpeg)


