ಊರಿನ ತ್ಯಾಜ್ಯ ಎಸೆಯುವ ಜಾಗ ಗುರುತಿಸಿ ಕಾರ್ಯಕ್ರಮಕ್ಕೆ ಉತ್ತಮ ಸ್ಪಂದನೆ: ಸಿಇಓ
ಉಡುಪಿ, ಅ.1: ಸ್ವಚ್ಛ ಭಾರತ ಮಿಷನ್ (ಗ್ರಾ) ಯೋಜನೆಯಡಿ ಕಳೆದೊಂದು ವಾರದಿಂದ ಜಿಲ್ಲೆಯಾದ್ಯಂತ ನಡೆಯುತ್ತಿರುವ ಊರಿನ ತ್ಯಾಜ್ಯ ಎಸೆಯುವ ಜಾಗ ಗುರುತಿಸಿ (ಗಾರ್ಬೇಜ್ ಬ್ಲಾಕ್‌ಸ್ಪಾಟ್ ಐಡೆಂಟಿಪಿಕೇಷನ್) ಕೈಂಕರ್ಯಕ್ಕೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ದೊರಕಿರುವುದಾಗಿ ಉಡುಪಿ ಜಿಪಂನ ಮುಖ್ಯ ಕಾರ್ಯನಿರ್ವಹಣಾಧಿಾರಿ ಡಾ.ನವೀನ್ ಭಟ್ ವೈ. ತಿಳಿಸಿದ್ದಾರೆ.
ಗ್ರಾಪಂಗಳ ಮುತುವರ್ಜಿಯಲ್ಲಿ ಜಿಲ್ಲೆಯಾದ್ಯಂತ ಈವರೆಗೆ ಸುಮಾರು 78 ಬ್ಲಾಕ್ ಸ್ಪಾಟ್‌ಗಳನ್ನು ಗುರುತಿಸಿ ಸ್ವಚ್ಛಗೊಳಿಸಲು ಅಗತ್ಯ ಕ್ರಮಕೈಗೊಳ್ಳಲಾಗಿದೆ. ಸಾರ್ವಜನಿಕರಿಂದ ಒಟ್ಟು 35 ಕಡೆಗಳಲ್ಲಿ ಬ್ಲಾಕ್ ಸ್ಪಾಟ್ ಇರುವ ಬಗ್ಗೆ ವಾಟ್ಸಪ್ ಸಂಖ್ಯೆ: 9483330564ಕ್ಕೆ ಮಾಹಿತಿಗಳು ಬಂದಿದ್ದು, ಇದರಲ್ಲಿ ಜಿಪಂ ವ್ಯಾಪ್ತಿಯ ಗ್ರಾಮೀಣ ಭಾಗಕ್ಕೆ ಸೇರಿದ 29 ಬ್ಲಾಕ್‌ಸ್ಪಾಟ್‌ಗಳಿದ್ದು, ಅವುಗಳನ್ನು ಸ್ವಚ್ಛಗೊಳಿ ಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಉಳಿದಂತೆ ಸುಮಾರು 40 ಕಡೆಗಳಲ್ಲಿ ತ್ಯಾಜ್ಯ ಎಸೆಯುವ ಕಪ್ಪು ಜಾಗವನ್ನು ಗ್ರಾಮಪಂಚಾಯತ್‌ಗಳು ಗುರುತಿಸಿದ್ದು, ಅವುಗಳನ್ನು ಸಹ ಸ್ವಚ್ಚಗೊಳಿಸಿ ಬಹುತೇಕ ಕಡೆಗಳಲ್ಲಿ ಗಿಡ ನೆಡುವುದು, ಸಿಸಿಟಿವಿ ಅಳವಡಿಕೆ, ಬ್ಯಾನರ್, ಸೂಚನಾ ಫಲಕ ಅಳವಡಿಕೆ ಮಾಡಲಾಗಿದೆ.
ಬ್ಲಾಕ್ ಸ್ಪಾಟ್‌ಗಳನ್ನು ನಿರ್ಮೂಲನಗೊಲಿಸುವ ಜೊತೆಗೆ ಕೆಲವೆಡೆ ಅವುಗಳನ್ನು ಹೂದೋಟಗಳಾಗಿ ಪರಿವರ್ತಿಸುವ ಮೂಲಕ ಕಲಾತ್ಮಕ ಸ್ಪರ್ಶವನ್ನು ಸಹ ನೀಡಲಾಗಿದೆ. ಕೋಟೇಶ್ವರ ಗ್ರಾಪಂ ವ್ಯಾಪ್ತಿಯಲ್ಲಿ ಇದನ್ನು ಕಾಣಬಹುದಾಗಿದೆ ಎಂದು ಸಿಇಓ ಡಾ.ಭಟ್ ತಿಳಿಸಿದ್ದಾರೆ.
ಜಿಲ್ಲೆಯಾದ್ಯಂತ ಬ್ಲಾಕ್ ಸ್ಪಾಟ್ ನಿರ್ಮೂಲನಾ ಕಾರ್ಯ ಮುಂದುವರಿಯಲಿದ್ದು, ಗಾಂಧಿ ಜಯಂತಿಯ ದಿನದಂದು ಪಂಚಾಯತ್ ಗಳಲ್ಲಿ ಸ್ವಚ್ಛತಾ ಕಾರ್ಯ ನಡೆಯಲಿದೆ ಎಂದವರು ಹೇಳಿದ್ದಾರೆ.







