ಉಡುಪಿ ಜಿಲ್ಲೆಯಲ್ಲಿ ನೈರ್ಮಲ್ಯ ಗಣತಿಗೆ ಸಿದ್ಧತೆ
ಉಡುಪಿ, ಅ.1: ಜಿಲ್ಲೆಯಲ್ಲಿ ನೈರ್ಮಲ್ಯ ಸ್ಥಿತಿಗತಿಗಳ ಬಗ್ಗೆ ಅಧ್ಯಯನ ನಡೆಸಲು ನೈರ್ಮಲ್ಯ ಗಣತಿ ನಡೆಸಲಾಗುತ್ತಿದ್ದು, ಈ ಗಣತಿಯ ಆಧಾರದಲ್ಲಿ ಸ್ಥಿತಿಗತಿಗಳ ಸುಧಾರಣೆಗೆ ಯೋಜನೆ ರೂಪಿಸಲು ಉದ್ದೇಶಿಸಲಾಗಿದೆ.
ಈ ಗಣತಿಯಲ್ಲಿ ಕುಟುಂಬಗಳ ವೈಯಕ್ತಿಕ ಶೌಚಾಲಯದ ಬಳಕೆ, ಶೌಚಾಲಯ ತುಂಬಿದಾಗ ವಿಲೇವಾರಿ ವಿಧಾನದ ಬಗ್ಗೆ, ತ್ಯಾಜ್ಯವನ್ನು ಕುಟುಂಬ ಹಂತದಲ್ಲಿ ವಿಂಗಡಣೆ ಹಾಗೂ ಅದರ ವಿಲೇವಾರಿ ವಿಧಾನ, ದ್ರವತ್ಯಾಜ್ಯ ನಿರ್ವಹಣೆಯ ವಿಧಾನ ಸೇರಿದಂತೆ ಪ್ರಮುಖ ಮಾಹಿತಿ ಗಳನ್ನು ಕಲೆ ಹಾಕಲಾಗುವುದು.
ಇದರೊಂದಿಗೆ ಕುಟುಂಬಗಳಿಗೆ ನೈರ್ಮಲ್ಯತೆ ಬಗ್ಗೆ ಹೆಚ್ಚಿನ ಮಾಹಿತಿ, ಅವಳಿಗುಂಡಿ ಶೌಚಾಲಯದ ಮಹತ್ವ, ಮ್ಯಾನುವಲ್ ಸ್ಯ್ಕಾವೆಂಜರ್ ಕಾಯಿದೆ, ಹಸಿ ತ್ಯಾಜ್ಯ ನಿರ್ವಹಣೆ ವಿಧಾನ, ಒಣತ್ಯಾಜ್ಯ ನಿರ್ವಹಣೆ, ಋತುಚಕ್ರ ತ್ಯಾಜ್ಯ ನಿರ್ವಹಣೆ, ಬೂದುನೀರು ನಿರ್ವಹಣೆ ಅಗತ್ಯತೆ ಇತ್ಯಾದಿ ವಿಷಯಗಳ ಬಗ್ಗೆ, ನರೇಗಾ ಯೋಜನೆಯಲ್ಲಿ ಸೋಕ್ ಪಿಟ್ ನಿರ್ಮಾಣ, ಗೊಬ್ಬರಗುಂಡಿ ನಿರ್ಮಾಣ, ಎರೆಹುಳು ಘಟಕ, ಪೌಷ್ಠಿಕ ತೋಟ ಇತ್ಯಾದಿಗಳ ಬಗ್ಗೆ ಮಾಹಿತಿ, ಜೊತೆಗೆ ಜೆಜೆಎಂ ಮನೆ ಮನೆಗೆ ಗಂಗೆ ಯೋಜನೆ ಬಗ್ಗೆ ಸಹ ಮಾಹಿತಿ ನೀಡಲಾಗುತ್ತದೆ.
ಗಣತಿ ಸಮಯದಲ್ಲಿ ಸಾರ್ವಜನಿಕರು ನಿಖರವಾದ ಮಾಹಿತಿ ನೀಡುವಂತೆ ಹಾಗೂ ಮಾಹಿತಿ ಕೈಪಿಡಿಯಲ್ಲಿ ಪ್ರಥಮ ಬಾರಿಗೆ ಕ್ಯೂಆರ್ ಕೋಡ್ ಅಳವಡಿಸಿ ಅದರಂತೆ ಸರ್ಕಾರದ ಯೋಜನೆಗೆ ಸಂಬಂಧಿಸಿದ 5 ವೀಡಿಯೋಗಳನ್ನು ಅಳವಡಿಸಿ ಅದರ ಮಾಹಿತಿ ಸಹ ತಿಳಿದುಕೊಂಡು ಯೋಜನೆಗಳ ಸದುಪಯೋಗ ಪಡೆಯುವಂತೆ ಕೋರಲಾಗಿದೆ.
ಸ್ವಚ್ಛ ಸರ್ವೇಕ್ಷಣ ಗ್ರಾಮೀಣ 2021 ಕಾರ್ಯಕ್ರಮದಡಿ ಸಾರ್ವಜನಿಕರು ತಮ್ಮ ಅಭಿಪ್ರಾಯಗಳನ್ನು ಮೊಬೈಲ್ ಆ್ಯಪ್‌ಗಳ ಮೂಲಕ ದಾಖಲಿ ಸಲು ಅವಕಾಶ ಕಲ್ಪಿಸಲಾಗಿದ್ದು, ಸಾರ್ವಜನಿಕರು ಮೊಬೈಲ್ ಫ್ಲೇ ಸ್ಟೋರ್‌ನಲ್ಲಿ ಎಸ್‌ಎಸ್‌ಜಿ 2021’ ಆ್ಯಪ್‌ನ್ನು ಡೌನ್‌ಲೋಡ್ ಮಾಡಿ ತಮ್ಮ ಅಭಿಪ್ರಾಯ ದಾಖಲಿಸುವಂತೆ ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ನವೀನ್ ಭಟ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







