ಅರುಣಾಚಲ ಪ್ರದೇಶದ ಮೂರು ಜಿಲ್ಲೆಗಳು ಆತಂಕಿತ ಪ್ರದೇಶಗಳಾಗಿ ಘೋಷಣೆ
ಹೊಸದಿಲ್ಲಿ,ಅ.1: ಬಂಡುಕೋರ ಚಟುವಟಿಕೆಗಳು ಮತ್ತು ಕಾನೂನು-ಸುವ್ಯವಸ್ಥೆ ಸ್ಥಿತಿಯ ಪುನರ್ಪರಿಶೀಲನೆ ಹಿನ್ನೆಲೆಯಲ್ಲಿ ಅರುಣಾಚಲ ಪ್ರದೇಶದ ಮೂರು ಜಿಲ್ಲೆಗಳಲ್ಲಿ ಹಾಗೂ ಇನ್ನೊಂದು ಜಿಲ್ಲೆಯ ಎರಡು ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿಯ ಪ್ರದೇಶಗಳನ್ನು ಆರು ತಿಂಗಳ ಅವಧಿಗೆ ಸಶಸ್ತ್ರ ಪಡೆಗಳ ವಿಶೇಷಾಧಿಕಾರಗಳ ಕಾಯ್ದೆ (ಅಫ್ ಸ್ಪಾ)ಯಡಿ ಆತಂಕಿತ ಪ್ರದೇಶಗಳೆಂದು ಕೇಂದ್ರವು ಘೋಷಿಸಿದೆ. ಈ ಸಂಬಂಧ ಕೇಂದ್ರ ಗೃಹ ಸಚಿವಾಲಯವು ಹೊರಡಿಸಿರುವ ಅಧಿಸೂಚನೆಯು 2021,ಅ.1ರಿಂದ 2022,ಮಾ.31ರವರೆಗೆ ಜಾರಿಯಲ್ಲಿರುತ್ತದೆ.
ಸುದೀರ್ಘ ಅವಧಿಯಿಂದ ಅಫ್ಸ್ಪಾ ಜಾರಿಯಲ್ಲಿರುವ ಲೋವರ್ ದಿಬಾಂಗ್ ಮತ್ತು ಲೋಹಿತ್ ಜಿಲ್ಲೆಗಳ ಎರಡು ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಭದ್ರತಾ ಸ್ಥಿತಿಯಲ್ಲಿ ಸುಧಾರಣೆಯಾಗಿರುವುದರಿಂದ ಇದೇ ಮೊದಲ ಬಾರಿಗೆ ಕಾಯ್ದೆಯನ್ನು ಹಿಂದೆಗೆದುಕೊಳ್ಳಲಾಗಿದೆ ಎಂದು ಗೃಹ ಸಚಿವಾಲಯದ ಅಧಿಕಾರಿಯೋರ್ವರು ಶುಕ್ರವಾರ ತಿಳಿಸಿದರು.
ಕೇಂದ್ರ ಸರಕಾರವು ಅಫ್ಸ್ಪಾದ ಕಲಂ 3ರಡಿ ತನಗೆ ಪ್ರದತ್ತ ಅಧಿಕಾರವನ್ನು ಬಳಸಿ ತಿರಾಪ್,ಚಾಂಗ್ಲಾಂಗ್ ಮತ್ತು ಲಾಂಗ್ಡಿಂಗ್ ಜಿಲ್ಲೆಗಳನ್ನು ಹಾಗೂ ನಮ್ಸಾಯಿ ಜಿಲ್ಲೆಯ ಎರಡು ಮತ್ತು ಲೋವರ್ ದಿಬಾಂಗ್ ಹಾಗೂ ಲೋಹಿತ್ ಜಿಲ್ಲೆಗಳಲ್ಲಿಯ ತಲಾ ಒಂದು ಪೊಲೀಸ್ ಠಾಣೆಗಳ ವ್ಯಾಪ್ತಿಯ ಪ್ರದೇಶಗಳನ್ನು ಆತಂಕಿತ ಪ್ರದೇಶವೆಂದು 2021,ಎ.1ರ ಅಧಿಸೂಚನೆಯ ಮೂಲಕ ಘೋಷಿಸಿತ್ತು.
ಸರಕಾರಿ ಅಧಿಕಾರಿಗಳಿಗೆ ನೆರವಾಗಲು ಸಶಸ್ತ್ರ ಪಡೆಗಳ ಕಾರ್ಯಾಚರಣೆ ಅಗತ್ಯವಾಗಿರುವ ಪ್ರದೇಶಗಳಲ್ಲಿ ಅಫ್ ಸ್ಪಾವನ್ನು ಹೇರಲಾಗುತ್ತದೆ.