ವಿಚಾರಣೆಗೆ ಹಾಜರಾಗದೆ ತಪ್ಪಿಸಿಕೊಂಡಿದ್ದ ನಾಝಿ ಶಿಬಿರದ ಕಾರ್ಯದರ್ಶಿ, 96 ವರ್ಷದ ಮಹಿಳೆ ಬಂಧನ

ಬರ್ಲಿನ್, ಅ.1: ಜರ್ಮನ್ನಲ್ಲಿ ಈ ಹಿಂದಿನ ನಾಝಿ ಆಡಳಿತದ ಸಂದರ್ಭ ಸ್ಟಟ್ ಯಾತನಾ ಶಿಬಿರದ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದ 96 ವರ್ಷದ ಮಹಿಳೆಯನ್ನು ವಿಚಾರಣೆಗೆ ಹಾಜರಾಗದೆ ತಪ್ಪಿಸಿಕೊಳ್ಳುವ ಆರೋಪದಲ್ಲಿ ಗುರುವಾರ ಬಂಧಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಈಕೆಯ ಮೇಲೆ ಹತ್ಯೆಗೆ ನೆರವಾದ 11,000ಕ್ಕೂ ಹೆಚ್ಚು ಕೌಂಟ್ ಆರೋಪ ದಾಖಲಾಗಿದೆ. ಇಝೆಹೋ ನಗರದ ನ್ಯಾಯಾಲಯದಲ್ಲಿ ಗುರುವಾರ ವಿಚಾರಣೆ ಆರಂಭವಾಗುವುದಕ್ಕೂ ಕೆಲ ಗಂಟೆಗಳ ಮೊದಲು ಈಕೆ ಹ್ಯಾಂಬರ್ಗ್ ಬಳಿಯ ತನ್ನ ಮನೆಯಿಂದ ಟ್ಯಾಕ್ಸಿ ಏರಿ ಪರಾರಿಯಾಗಲು ಯತ್ನಿಸಿದ್ದಳು. ಈ ಹಿಂದೆ ಹಲವು ಬಾರಿ ವಿಚಾರಣೆಗೆ ಸಮನ್ಸ್ ನೀಡಿದರೂ ಈಕೆ ನ್ಯಾಯಾಲಯದ ವಿಚಾರಣೆಗೆ ಹಾಜರಾಗಲು ನಿರಾಕರಿಸಿದ್ದಳು ಎಂದು ನ್ಯಾಯಾಲಯದ ವಕ್ತಾರ ಫ್ರೆಡ್ರಿಕ್ ಮಿಲ್ಹೋಫರ್ ಹೇಳಿದ್ದಾರೆ.
ಈಕೆಯನ್ನು ಪೊಲೀಸರು ಬಂಧಿಸಿದ್ದು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ಈ ವಯಸ್ಸಿನಲ್ಲಿ ಈಕೆಯನ್ನು ಜೈಲಿನಲ್ಲಿ ಬಂಧನದಲ್ಲಿಡಲು ಆರೋಗ್ಯದ ಸಮಸ್ಯೆಯಿದೆಯೇ ಎಂಬುದನ್ನು ವೈದ್ಯರು ಪರೀಕ್ಷೆ ನಡೆಸಿದ ಬಳಿಕ ಈಕೆಯ ಕಸ್ಟಡಿ ಅವಧಿಯನ್ನು ನ್ಯಾಯಾಲಯ ನಿರ್ಧರಿಸಲಿದೆ ಎಂದವರು ಹೇಳಿದ್ದಾರೆ.





