ಬಿಜೆಪಿಗೆ ದೊಡ್ಡ ಹಿನ್ನಡೆ: ಪಕ್ಷ ತೊರೆದ ಉತ್ತರ ಬಂಗಾಳದ ಮತ್ತೊಬ್ಬ ಶಾಸಕ

photo: twitter
ಕೋಲ್ಕತಾ: ಉತ್ತರ 24 ದಿನಜ್ಪುರದ ರಾಯಗಂಜ್ನ ಶಾಸಕರಾದ ಕೃಷ್ಣ ಕಲ್ಯಾಣಿ ಅವರು ಶುಕ್ರವಾರ ಪಕ್ಷಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದರಿಂದ ಬಿಜೆಪಿ ತನ್ನ ಉತ್ತರ ಬಂಗಾಳದ ಭದ್ರಕೋಟೆಯಲ್ಲಿ ಮತ್ತೊಂದು ಆಘಾತವನ್ನು ಎದುರಿಸಿತು.
ಪಕ್ಷದ ರಾಯಗಂಜ್ ಸಂಸದೆ ಹಾಗೂ ಮಾಜಿ ಕೇಂದ್ರ ಸಚಿವೆ ದೇಬಶ್ರೀ ಚೌಧುರಿ ವಿರುದ್ಧ ಮಾತನಾಡಿದ್ದಕ್ಕಾಗಿ ಬಿಜೆಪಿ ಪಕ್ಷ ಕಲ್ಯಾಣಿ ಅವರಿಗೆ ಶೋಕಾಸ್ ನೋಟಿಸ್ ಕಳುಹಿಸಿದ ಒಂದು ದಿನದ ನಂತರ ರಾಜೀನಾಮೆ ನೀಡಿದ್ದಾರೆ.
ದೇಬಶ್ರೀ ತನ್ನ ವಿರುದ್ಧ ಪಿತೂರಿ ನಡೆಸಿದ್ದಾರೆ ಎಂದು ಕಲ್ಯಾಣಿ ಆರೋಪಿಸಿದ್ದರು.
"ನಾನು ರಾಯಗಂಜ್ ಸಂಸದೆ ಇರುವ ಪಕ್ಷದಲ್ಲಿ ಕೆಲಸ ಮಾಡಲು ಸಾಧ್ಯವಿಲ್ಲ. ನಾನು ಜನರಿಗಾಗಿ ಕೆಲಸ ಮಾಡಿದ್ದೇನೆ ಹಾಗೂ ಅದಕ್ಕೆ ಪ್ರತಿಯಾಗಿ ನನಗೆ ಶೋಕಾಸ್ ಪತ್ರವನ್ನು ನೀಡಲಾಗಿದೆ. ರಾಯಗಂಜ್ ಜನರು ಸಂಸದರ ಮುಖವನ್ನು ಅಷ್ಟೇನೂ ನೋಡುವುದಿಲ್ಲ. ಆದರೆ ಅವರಿಗೆ ಪ್ರಶಸ್ತಿ ನೀಡಲಾಗುತ್ತಿದೆ. ಪಕ್ಷವನ್ನು ತೊರೆಯುವುದೇ ಉತ್ತಮ" ಎಂದು ಕಲ್ಯಾಣಿ ಹೇಳಿದರು.
ಆದಾಗ್ಯೂ, ಅವರ ಮುಂದಿನ ಕ್ರಮದ ಬಗ್ಗೆ ಅಥವಾ ಅವರು ಬೇರೆ ಯಾವುದೇ ರಾಜಕೀಯ ಪಕ್ಷಕ್ಕೆ ಸೇರುವ ಬಗ್ಗೆ ಏನನ್ನೂ ಬಹಿರಂಗಪಡಿಸಲಿಲ್ಲ.
ಬಿಜೆಪಿಯ ರಾಜ್ಯಾಧ್ಯಕ್ಷ ಸುಕಾಂತ ಮಜುಂದಾರ್ ಅವರು ಕಲ್ಯಾಣಿಗೆ ಪಕ್ಷಕ್ಕೆ ಮರಳುವಂತೆ ವಿನಂತಿಸಿದರು.
"ತಮ್ಮ ನಿರ್ಧಾರವನ್ನು ಪರಿಗಣಿಸಿ ಹಾಗೂ ಹಿಂತಿರುಗಿ ಬರುವಂತೆ ನಾನು ವಿನಂತಿಸಲು ಬಯಸುತ್ತೇನೆ. ಸಂವಾದಗಳನ್ನು ನಡೆಸುವ ಮೂಲಕ ಸಮಸ್ಯೆಯನ್ನು ಪರಿಹರಿಸಬಹುದು" ಎಂದು ಅವರು ಹೇಳಿದರು.
ರಾಜ್ಯ ಅಸೆಂಬ್ಲಿ ಚುನಾವಣೆ ಫಲಿತಾಂಶದ ಬಳಿಕ ನಾಲ್ವರು ಬಿಜೆಪಿ ಶಾಸಕರು ಟಿಎಂಸಿಗೆ ಪಕ್ಷಾಂತರಗೊಂಡಿದ್ದು, ಬಿಜೆಪಿಯ ಶಾಸಕಾಂಗ ಬಲವನ್ನು 77 ರಿಂದ 71 ಕ್ಕೆ ತಗ್ಗಿಸಿದರು. ವಿಧಾನಸಭಾ ಚುನಾವಣೆಯಲ್ಲಿ ಗೆದ್ದ ಇಬ್ಬರು ಹಾಲಿ ಸಂಸದರು ಸಂಸತ್ತಿನಲ್ಲಿ ಸಂಸದರಾಗಿ ಮುಂದುವರಿಯಲು ನಿರ್ಧರಿಸಿದ ಕಾರಣ ರಾಜೀನಾಮೆ ನೀಡಿದ್ದರು.