ಕೋವಿಡ್ ಲಸಿಕೆಗೆ ಆಧಾರ್ ಕಡ್ಡಾಯ ಮಾಡದಂತೆ ಮನವಿ: ಕೇಂದ್ರ ಸರಕಾರಕ್ಕೆ ಸುಪ್ರೀಂ ಕೋರ್ಟ್ ನೋಟಿಸ್

ಹೊಸದಿಲ್ಲಿ, ಅ.1: ಕೋವಿಡ್ ಲಸಿಕೆ ನೀಡುವ ಸಂದರ್ಭ ಲಸಿಕೆ ನೀಡುವವರಿಗೆ ಹಾಗೂ ಕೋವಿಡ್ ಸೆಂಟರ್ಗಳಿಗೆ ಕೋವಿನ್ ಪೋರ್ಟಲ್ ಮೂಲಕ ಆಧಾರ್ ವಿವರ ಸಲ್ಲಿಸುವ ಕಡ್ಡಾಯ ಪೂರ್ವ ಶರತ್ತನ್ನು ರದ್ದುಗೊಳಿಸುವಂತೆ ಕೋರಿ ಸಲ್ಲಿಸಿದ ಮನವಿಯ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಶುಕ್ರವಾರ ಕೇಂದ್ರ ಸರಕಾರ ಹಾಗೂ ಭಾರತದ ವಿಶಿಷ್ಟ ಗುರುತು ಪ್ರಾಧಿಕಾರ (ಯುಐಡಿಎಐ)ಕ್ಕೆ ನೋಟಿಸು ಜಾರಿ ಮಾಡಿದೆ.
ಪ್ರಕರಣದ ಕುರಿತಂತೆ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ ನೇತೃತ್ವದ ಪೀಠ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವಾಲಯ, ಇಲೆಕ್ಟ್ರಾನಿಕ್ಸ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವಾಲಯ, ಭಾರತದ ವಿಶಿಷ್ಟ ಗುರುತು ಪ್ರಾಧಿಕಾರಕ್ಕೆ ನೋಟಿಸು ಜಾರಿ ಮಾಡಿ ಪ್ರತಿಕ್ರಿಯೆ ಕೋರಿದೆ.
ಕೋವಿನ್ ಪೋರ್ಟಲ್ನಲ್ಲಿ ಅಗತ್ಯದ ಬದಲಾವಣೆಗಳನ್ನು ತರಲು ಇಲೆಕ್ಟ್ರಾನಿಕ್ಸ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವಾಲಯಕ್ಕೆ ನಿರ್ದೇಶಿಸುವಂತೆ ಕೂಡ ಮನವಿ ಕೋರಿದೆ.
ಕೋವಿನ್ ಪೋರ್ಟಲ್ ದೇಶದ ಎಲ್ಲ ನಾಗರಿಕರಿಗೆ ಬಳಕೆಗೆ ಲಭ್ಯವಾಗುವಂತೆ ಹಾಗೂ ಬಳಕೆದಾರರ ಸ್ನೇಹಿಯಾಗುವಂತೆ ಅದರ ಸಾಫ್ಟ್ವೇರ್, ತಾಂತ್ರಿಕತೆಯನ್ನು ಪರಿಷ್ಕರಿಸಲು ಕೇಂದ್ರ ಸರಕಾರಕ್ಕೆ ನಿರ್ದೇಶಿಸುವಂತೆ ಕೂಡ ಮನವಿ ನ್ಯಾಯಾಲಯವನ್ನು ಕೋರಿದೆ.
ಕೋವಿಡ್ ಲಸಿಕೆ ತೆಗೆದುಕೊಳ್ಳಲು ಗುರುತಿನ ಆಧಾರವಾಗಿ ಆಧಾರ್ ಕಾರ್ಡ್ ಮಾತ್ರ ಸಲ್ಲಿಸುವಂತೆ ಪ್ರಾಧಿಕಾರ ಸೂಚಿಸಬಾರದು ಎಂದು ಮನವಿ ಹೇಳಿದೆ. ಪುಣೆ ಮೂಲದ ವಕೀಲ ಹಾಗೂ ಸಾಮಾಜಿಕ ಹೋರಾಟಗಾರ ಸಿದ್ಧಾರ್ಥಶಂಕರ್ ಶರ್ಮಾ ಅವರು ಈ ಸಾರ್ವಜನಿಕ ಹಿತಾಸಕ್ತಿ ದಾವೆ ಸಲ್ಲಿಸಿದ್ದರು.