ಭಾರತದ ಕರಾವಳಿಯಿಂದ ದೂರ ಸಾಗುತ್ತಿರುವ ಶಾಹೀನ್ ಚಂಡಮಾರುತ

ಮುಂಬೈ,ಅ.1: ಅರಬಿ ಸಮುದ್ರದಲ್ಲಿ ಉಂಟಾಗಿರುವ ತೀವ್ರ ವಾಯುಭಾರ ಕುಸಿತವು ಶುಕ್ರವಾರ ಬೆಳಿಗ್ಗೆ ‘ಶಾಹೀನ್’ ಚಂಡಮಾರುತವಾಗಿ ರೂಪುಗೊಂಡಿದ್ದು,ಸಂಜೆಯ ವೇಳೆಗೆ ಇನ್ನಷ್ಟು ತೀವ್ರಗೊಂಡಿದೆ. ಅದು ಈಗ ಭಾರತದ ಕರಾವಳಿಯಿಂದ ದೂರಕ್ಕೆ ಸಾಗುತ್ತಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಚಂಡಮಾರುತ ಎಚ್ಚರಿಕೆ ವಿಭಾಗವು ತಿಳಿಸಿದೆ.
ಈಶಾನ್ಯ ಅರಬಿ ಸಮುದ್ರದಲ್ಲಿ ರೂಪುಗೊಂಡಿರುವ ಶಾಹೀನ್ ಚಂಡಮಾರುತ ಪ್ರತಿ ಗಂಟೆಗೆ 20 ಕಿ.ಮೀ.ವೇಗದಲ್ಲಿ ಪಶ್ಚಿಮ-ವಾಯುವ್ಯ ದಿಕ್ಕಿಗೆ ಚಲಿಸಿದೆ. ಮುಂದಿನ 12 ಗಂಟೆಗಳಲ್ಲಿ ಇದು ತೀವ್ರ ಚಂಡಮಾರುತವಾಗಿ ಪರಿವರ್ತನೆಗೊಳ್ಳುವ ಮತ್ತು ಮುಂದಿನ 36 ಗಂಟೆಗಳಲ್ಲಿ ಪಾಕಿಸ್ತಾನದ ಮಕ್ರಾನ್ ಕರಾವಳಿಗೆ ಸಮೀಪದಿಂದ ಪಶ್ಚಿಮ-ವಾಯುವ್ಯ ದಿಕ್ಕಿನತ್ತ ಚಲಿಸುವ ಸಾಧ್ಯತೆಯಿದೆ. ಬಳಿಕ ಅದು ಪಶ್ಚಿಮ-ನೈರುತ್ಯ ದಿಕ್ಕಿಗೆ ತಿರುಗುವ ಮತ್ತು ಒಮನ್ ಕರಾವಳಿಯತ್ತ ಸಾಗಿ ಕ್ರಮೇಣ ದುರ್ಬಲಗೊಳ್ಳುವ ಸಾಧ್ಯತೆಗಳಿವೆ ಎಂದು ಅದು ತಿಳಿಸಿದೆ.
ಸೆ.26ರಂದು ಪೂರ್ವ ಕರಾವಳಿಯನ್ನು ಅಪ್ಪಳಿಸಿದ್ದ ಗುಲಾಬ್ ಚಂಡಮಾರುತದ ಪಳೆಯುಳಿಕೆಗಳಿಂದ ಶಾಹೀನ್ ಚಂಡಮಾರುತವು ರೂಪುಗೊಂಡಿದೆ.
ಗುಲಾಬ್ ಚಂಡಮಾರುತವು ತೆಲಂಗಾಣ, ಛತ್ತೀಸ್ಗಡ, ಮಹಾರಾಷ್ಟ್ರ ಮತ್ತು ಗುಜರಾತಗಳ ಭಾಗಗಳಿಗೆ ಅಪ್ಪಳಿಸುತ್ತ ಮಧ್ಯ ಭಾರತದತ್ತ ಚಲಿಸುತ್ತಿದ್ದಂತೆ ಅದರ ತೀವ್ರತೆ ತಗ್ಗಿತ್ತು. ಅದರ ಅವಶೇಷಗಳು ಅರಬಿ ಸಮುದ್ರವನ್ನು ಪ್ರವೇಶಿಸಿದ್ದರಿಂದ ಶುಕ್ರವಾರ ಬೆಳಿಗ್ಗೆ ಶಾಹೀನ್ ಚಂಡಮಾರುತ ರೂಪುಗೊಂಡಿದೆ. ಇದು ಬಂಗಾಳ ಕೊಲ್ಲಿಯಲ್ಲಿ ಸೃಷ್ಟಿಯಾದ ಚಂಡಮಾರುತವು ದೇಶದ ಅಗಲವನ್ನು ಕ್ರಮಿಸಿ ಪಶ್ಚಿಮ ಕರಾವಳಿಯನ್ನು ತಲುಪಿ ಮತ್ತೆ ಚಂಡಮಾರುತವಾಗಿ ರೂಪುಗೊಂಡಿರುವ ಅಪರೂಪದ ವಿದ್ಯಮಾನವಾಗಿದೆ ಎಂದು ಇಲಾಖೆಯು ತಿಳಿಸಿದೆ.