ರಾಜ್ಯ ಹೈಕೋರ್ಟ್ ಗೆ ಅ.11ರಿಂದ ದಸರಾ ರಜೆ

ಬೆಂಗಳೂರು, ಅ.1: ದಸರಾ ಹಿನ್ನೆಲೆ ಅ.11ರಿಂದ 16ರವರೆಗೆ ಕಲಬುರ್ಗಿ, ಧಾರವಾಡ ಪೀಠವೂ ಹಾಗೂ ಬೆಂಗಳೂರು ಹೈಕೋರ್ಟ್ ಪ್ರಧಾನ ಪೀಠಕ್ಕೆ ಒಂದು ವಾರ ರಜೆ ನೀಡಲಾಗಿದೆ.
ಹೈಕೋರ್ಟ್‍ನ ಹಂಗಾಮಿ ಸಿಜೆ ಎಸ್.ಸಿ.ಶರ್ಮಾ ಅವರ ಆದೇಶದ ಮೇರೆಗೆ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಶಿವಶಂಕರೇಗೌಡ ಈ ಕುರಿತು ನೋಟಿಫಿಕೇಶನ್ ಹೊರಡಿಸಿದ್ದಾರೆ.
ಆದೇಶದನ್ವಯ ಹೈಕೋರ್ಟಿನ ಎಲ್ಲ ಪೀಠಗಳಿಗೆ ಒಂದು ವಾರ ದಸರಾ ರಜೆ ನೀಡಲಾಗಿದೆ. ಈ ಅವಧಿಯಲ್ಲಿ ಸಿವಿಲ್ ಹಾಗೂ ಕ್ರಿಮಿನಲ್ ಪ್ರಕರಣಗಳಿಗೆ ಸಂಬಂಧಿಸಿದಂತೆ ಯಾವುದೇ ಅರ್ಜಿ, ಮೇಲ್ಮನವಿ ಸ್ವೀಕರಿಸುವುದಿಲ್ಲ. ಆದರೆ, ತುರ್ತುಸಂದರ್ಭದಲ್ಲಿ ಮಾತ್ರ ಮಧ್ಯಂತರ ಆದೇಶ, ತಡೆಯಾಜ್ಞೆ ಹಾಗೂ ತಾತ್ಕಾಲಿಕ ನಿಬರ್ಂಧಕಾಜ್ಞೆಗಳಿಗೆ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಲಾಗಿದೆ.
ಅರ್ಜಿ ಸಲ್ಲಿಸುವುದಿದ್ದಲ್ಲಿ ಅ.11ರ ಬೆಳಿಗ್ಗೆ 10-30ರಿಂದ 12-30ರ ನಡುವೆ ಸಲ್ಲಿಸಿದರೆ, ಆ ಅರ್ಜಿಗಳನ್ನು ಆಯಾ ಪೀಠಗಳ ಮುಂದೆ ವಿಚಾರಣೆಗೆ ನಿಗದಿಪಡಿಸಲಾಗುವುದು. ಈ ಅವಧಿಯಲ್ಲಿ ರಿಜಿಸ್ಟ್ರಾರ್ (ನ್ಯಾಯಾಂಗ) ಮುಂದೆ ಸಲ್ಲಿಸುವ ಮೆಮೋಗಳನ್ನು ಪರಿಗಣಿಸಲಾಗದು ಎಂದು ಆದೇಶದ ಪ್ರತಿಯಲ್ಲಿ ಉಲ್ಲೇಖಿಸಲಾಗಿದೆ.





