ಉತ್ತರಾಖಂಡ ಹಿಮ ಪ್ರವಾಹದ ಬಳಿಕ ಐದು ನೌಕಾಪಡೆ ಪರ್ವತಾರೋಹಿಗಳು ನಾಪತ್ತೆ
ಸಾಂದರ್ಭಿಕ ಚಿತ್ರ (Source: PTI)
ಗೋಪೇಶ್ವರ್/ ಉತ್ತರಕಾಶಿ, ಅ.2: ಉತ್ತರಾಖಂಡದ ಬಗೇಶ್ವರ ಜಿಲ್ಲೆಯಲ್ಲಿ ಮೌಂಟ್ ತ್ರಿಶೂಲ್ ಶಿಖರವನ್ನು ತಲುಪುವ ಹಂತದಲ್ಲಿ, ಭೀಕರ ಹಿಮ ಪ್ರವಾಹದಲ್ಲಿ ಸಿಲುಕಿದ ಭಾರತೀಯ ನೌಕಾಪಡೆಯ ಐದು ಮಂದಿ ಪರ್ವತಾರೋಹಿಗಳು ಮತ್ತು ಜತೆಗಿದ್ದ ಸಹಾಯಕರೊಬ್ಬರು ನಾಪತ್ತೆಯಾಗಿದ್ದಾರೆ.
ಪ್ರಧಾನ ಕರ್ನಲ್ ಅಮಿತ್ ಬಿಷ್ಟ್ ನೇತೃತ್ವದ ಉತ್ತರಾಖಂಡದ ನೆಹರೂ ಇನ್ಸ್ಟಿಟ್ಯೂಟ್ ಆಫ್ ಮೌಂಟನೀಯರಿಂಗ್ನ ಪರಿಹಾರ ತಂಡ, ಹಿಮಪ್ರವಾಹದಿಂದ ಪೀಡಿತವಾಗಿರುವ ಪ್ರದೇಶಕ್ಕೆ ಶೋಧ ಕಾರ್ಯಾಚರಣೆಗೆ ತೆರಳಿದೆ ಎಂದು ಅಧಿಕೃತ ಮೂಲಗಳು ಹೇಳಿವೆ.
ಪರಿಹಾರ ತಂಡ ಜೋಶಿಮಠವನ್ನು ತಲುಪಿದ್ದು, ಪ್ರತೀಕೂಲ ಹವಾಮಾನ ಅವರ ಮುನ್ನಡೆಗೆ ಅಡ್ಡಿಯಾಗಿದೆ ಎಂದು ಮೂಲಗಳು ಹೇಳಿವೆ. ಭಾರತೀಯ ಸೇನೆ, ವಾಯುಪಡೆ ಮತ್ತು ರಾಜ್ಯ ವಿಕೋಪ ಸ್ಪಂದನ ಪಡೆಯ ಜಂಟಿ ತಂಡ, ಹೆಲಿಕಾಪ್ಟರ್ ನೆರವಿನಿಂದ ಪರಿಹಾರ ಕಾರ್ಯಾಚರಣೆಗೆ ಸಹಾಯ ನೀಡುತ್ತಿದೆ ಎಂದು ಹೇಳಲಾಗಿದೆ.
ಮೌಂಟ್ ತ್ರಿಶೂಲ ಶಿಖರವು ಹಿಮಾಲಯದ ಮೂರು ಉನ್ನತ ಶಿಖರಗಳ ಸಮೂಹವಾಗಿದ್ದು, ಉತ್ತರಾಖಂಡದ ಬಗೇಶ್ವರ ಜಿಲ್ಲೆಯಲ್ಲಿದೆ. ಭಾರತೀಯ ನೌಕಾಪಡೆಯ ಸಾಹಸಯಾತ್ರೆ ವಿಭಾಗವು ಎನ್ಐಎಂ ಅಧಿಕಾರಿಗಳಿಗೆ ಶುಕ್ರವಾರ ಪೂ.11 ಗಂಟೆಯ ವೇಳೆಗೆ ಈ ಬಗ್ಗೆ ಮಾಹಿತಿ ನೀಡಿ, ಪರಿಹಾರ ತಂಡದ ನೆರವು ಯಾಚಿಸಿತ್ತು.
ಲಭ್ಯ ಮಾಹಿತಿಯ ಪ್ರಕಾರ, ಭಾರತೀಯ ನೌಕಾಪಡೆಯ 20 ಮಂದಿ ಪರ್ವತಾರೋಹಿಗಳ ತಂಡ 7120 ಮೀಟರ್ ಎತ್ತರದ ಮೌಂಟ್ ತ್ರಿಶೂಲ್ಗೆ 15 ದಿನಗಳ ಹಿಂದೆ ಯಾತ್ರೆ ಆರಂಭಿಸಿತ್ತು. ಶುಕ್ರವಾರ ಮುಂಜಾನೆ ಹಿಮಪ್ರವಾಹಕ್ಕೆ ಈ ತಂಡ ಸಿಲುಕಿಕೊಂಡಿತು ಎನ್ನಲಾಗಿದೆ.