ಆದಿತ್ಯನಾಥ್ ರ ಟೀಕೆ: ಉತ್ತರ ಪ್ರದೇಶ ಮಾಜಿ ರಾಜ್ಯಪಾಲರ ಬಂಧನಕ್ಕೆ ಹೈಕೋರ್ಟ್ ತಡೆ

ಮಾಜಿ ರಾಜ್ಯಪಾಲ ಅಝೀಝ್ ಖುರೇಶಿ (Photo source: PTI)
ಅಲಹಾಬಾದ್, ಅ.2: ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಅವರನ್ನು ಟೀಕಿಸಿದ ಕಾರಣಕ್ಕೆ ದೇಶದ್ರೋಹ ಪ್ರಕರಣ ಎದುರಿಸುತ್ತಿರುವ ಉತ್ತರ ಪ್ರದೇಶದ ಮಾಜಿ ರಾಜ್ಯಪಾಲ ಅಝೀಝ್ ಖುರೇಶಿ ಅವರನ್ನು ಬಂಧಿಸದಂತೆ ಅಲಹಾಬಾದ್ ಹೈಕೋರ್ಟ್ ಶುಕ್ರವಾರ ತಡೆಯಾಜ್ಞೆ ನೀಡಿದೆ.
ಪ್ರಕರಣದಲ್ಲಿ ತಮ್ಮನ್ನು ಬಂಧಿಸದಂತೆ ತಡೆಯಾಜ್ಞೆ ನೀಡಬೇಕು ಮತ್ತು ಸ್ಥಳೀಯ ಬಿಜೆಪಿ ಮುಖಂಡ ಆಕಾಶ್ ಕುಮಾರ್ ಸಕ್ಸೇನಾ ರಾಂಪುರ ಜಿಲ್ಲೆಯ ಸಿವಿಲ್ ಲೈನ್ಸ್ ಪೊಲೀಸ್ ಠಾಣೆಯಲ್ಲಿ ಸೆಪ್ಟಂಬರ್ 5ರಂದು ದಾಖಲಿಸಿದ ತಮ್ಮ ವಿರುದ್ಧದ ಎಫ್ಐಆರ್ ರದ್ದುಪಡಿಸಬೇಕು ಎಂದು ಕೋರಿ ಖುರೇಷಿ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಪ್ರತೀಂಕರ್ ದಿವಾಕರ್ ಮತ್ತು ಮುಹಮ್ಮದ್ ಅಸ್ಲಂ ಅವರನ್ನು ಒಳಗೊಂಡ ನ್ಯಾಯಪೀಠ ಈ ಆದೇಶ ನೀಡಿದೆ.
ವಿಚಾರಣೆಯ ವೇಳೆ ಸರ್ಕಾರವನ್ನು ಪ್ರತಿನಿಧಿಸಿದ ವಕೀಲರು, ಈ ಸಂಬಂಧ ಸೂಚನೆಗಳನ್ನು ಪಡೆಯಲು ಮತ್ತು ಕೇಸ್ ಡೈರಿ ಸಮನ್ಸ್ಗಾಗಿ ಮೂರು ದಿನಗಳ ಕಾಲಾವಕಾಶ ಕೋರಿದರು.
ಅರ್ಜಿದಾರರ ಪರವಾಗಿ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಹಾಜರಾದ ಹಿರಿಯ ವಕೀಲ ಸಲ್ಮಾನ್ ಖುರ್ಷಿದ್, ಅರ್ಜಿದಾರರು 82 ವರ್ಷ ವಯಸ್ಸಿನವರಾಗಿದ್ದು, ಉತ್ತರ ಪ್ರದೇಶ ಮತ್ತು ಇತರ ಎರಡು ರಾಜ್ಯಗಳ ರಾಜ್ಯಪಾಲರಾಗಿದ್ದವರು. ಅವರಿಗೆ ಕಿರುಕುಳ ನೀಡದಂತೆ ಮಧ್ಯಂತರ ಆದೇಶದ ಮೂಲಕ ರಕ್ಷಣೆ ಒದಗಿಸಬೇಕು ಎಂದು ಕೋರಿದರು.
ಮುಂದಿನ ವಿಚಾರಣೆಯನ್ನು ಅಕ್ಟೋಬರ್ 6ಕ್ಕೆ ಮುಂದೂಡಿದ ನ್ಯಾಯಪೀಠ, "ಪ್ರಕರಣದ ವಾಸ್ತವಾಂಶಗಳು ಮತ್ತು ಸನ್ನಿವೇಶಗಳನ್ನು ಪರಿಗಣಿಸಿ, ಮುಂದಿನ ದಿನಾಂಕದವರೆಗೆ ಅರ್ಜಿದಾರರಿಗೆ ಬಂಧನದಿಂದ ಸುರಕ್ಷೆ ಒದಗಿಸಲಾಗಿದೆ" ಎಂದು ಸ್ಪಷ್ಟಪಡಿಸಿತು.
ಆದಿತ್ಯನಾಥ್ ವಿರುದ್ಧ ಖುರೇಶಿ ಅವಹೇಳನಕಾರಿ ಪದ ಬಳಸಿದ್ದಾರೆ ಎಂದು ಸಕ್ಸೇನಾ ತಮ್ಮ ಅರ್ಜಿಯಲ್ಲಿ ಆಪಾದಿಸಿದ್ದರು.