"ಇವರಿಂದ ಪತ್ರಕರ್ತರಿಗೆ ಕೆಟ್ಟ ಹೆಸರು": ಭಾರತದ ಪ್ರಮುಖ ಮಾಧ್ಯಮಗಳ ಬಗ್ಗೆ ಫ್ರಾನ್ಸ್ 24 ಚಾನೆಲ್ ಫ್ಯಾಕ್ಟ್ ಚೆಕ್

ಹೊಸದಿಲ್ಲಿ: ಅಫ್ಗಾನಿಸ್ತಾನದ ಮೇಲೆ ತಾಲಿಬಾನಿಗಳು ಸಂಪೂರ್ಣ ಹಿಡಿತ ಸಾಧಿಸಿದ ನಂತರ ಅಲ್ಲಿನ ಬಿಕ್ಕಟ್ಟಿನ ಸ್ಥಿತಿ ಕುರಿತು ಕೆಲ ಭಾರತೀಯ ಸುದ್ದಿ ವಾಹಿನಿಗಳು ಪ್ರಸಾರ ಮಾಡುತ್ತಿರುವ ಸುದ್ದಿಗಳು "ತಪ್ಪು ಮಾಹಿತಿಗಳಿಂದ ತುಂಬಿವೆ" ಹಾಗೂ "ಸಂಪೂರ್ಣವಾಗಿ ಕೆಟ್ಟ ವಿಷಯ" ಎಂದು ಫ್ರಾನ್ಸ್ ದೇಶದ ಫ್ರಾನ್ಸ್24 ಇಂಗ್ಲಿಷ್ ಸುದ್ದಿ ವಾಹಿನಿ ಬಣ್ಣಿಸಿದೆ.
ಕಳೆದ ವಾರ ಪ್ರಸಾರವಾದ ಈ ವಾಹಿನಿಯ ದೈನಂದಿನ ಫ್ಯಾಕ್ಟ್-ಚೆಕ್ ಕಾರ್ಯಕ್ರಮದಲ್ಲಿ ನಿರೂಪಕ ಜೇಮ್ಸ್ ಕ್ರೀಡನ್ ಅವರು ನಕಲಿ ಸುದ್ದಿಗಳನ್ನು ಪ್ರಸಾರ ಮಾಡುತ್ತಿರುವ ಭಾರತದ ಮುಖ್ಯವಾಹಿನಿ ಮಾದ್ಯಮದ ಎರಡು ನಿರ್ದಶನಗಳನ್ನು ಎತ್ತಿ ತೋರಿಸಿದ್ದಾರೆ. "ಅಫ್ಗಾನಿಸ್ತಾನದ ಮೇಲೆ ತಾಲಿಬಾನಿಗಳು ಹಿಡಿತ ಸಾಧಿಸಿದ ನಂತರ ಭಾರತದ ಮುಖ್ಯವಾಹಿನಿ ಮಾಧ್ಯಮಗಳು ತಪ್ಪು ಮಾಹಿತಿಗಳಿಂದ ತುಂಬಿವೆ" ಎಂದು ಫ್ರಾನ್ಸ್24 ಬಣ್ಣಿಸಿದೆ.
ಈ ವಾಹಿನಿ ನೀಡಿದ ಮೊದಲ ನಿರ್ದಶನ ಇಂಡಿಯಾ ಟುಡೇ ಮತ್ತು ಆಜ್ ತಕ್ ಚಾನಲ್‍ಗಳಿಗೆ ಸಂಬಂಧಿಸಿದ್ದಾಗಿತ್ತು. ಈ ತಿಂಗಳು ಪ್ರಸಾರ ಮಾಡಿದ ಸುದ್ದಿಯಲ್ಲಿ ಅಫ್ಗಾನಿಸ್ತಾನದಲ್ಲಿ ಪ್ರತಿರೋಧ ತೋರಿಸುತ್ತಿರುವ ಅಹ್ಮದ್ ಮಸ್ಸೌದ್ ನೇತೃತ್ವದ ಪಡೆಗಳು ಪಾಕಿಸ್ತಾನಿ ಜೆಟ್ ಒಂದನ್ನು ಹೇಗೆ ಹೊಡೆದುರುಳಿಸಿವೆ ಎಂದು ಚಾನಲ್‍ಗಳು ವಿವರಿಸಿದ್ದವು. ಮಸ್ಸೌದ್‍ಗೆ ಸೇರಿದ್ದೆನ್ನಲಾದ ಟ್ವಿಟ್ಟರ್ ಖಾತೆಯೊಂದನ್ನು ಉಲ್ಲೇಖಿಸಿ ಎರಡೂ ಚಾನಲ್‍ಗಳು ಸುದ್ದಿ ಪ್ರಸಾರ ಮಾಡಿದ್ದವು ಆದರೆ ನಂತರ ಈ ಸುದ್ದಿ ನಕಲಿ ಎಂದು ತಿಳಿದು ಬಂದಿತ್ತು.
"ಭಾರತೀಯ ವಾಹಿನಿಗಳು ಈ ಸುದ್ದಿಯನ್ನು ದೊಡ್ಡದೆಂಬಂತೆ ಬಿಂಬಿಸಿದ್ದವು, ಟ್ವಿಟ್ಟರ್ ಪೋಸ್ಟ್ ಒಂದನ್ನು ನಂಬಿ ಈ ರೀತಿ ಮಾಡುವುದು ಸರಿಯಲ್ಲ ಎಂದು ತೋರುತ್ತದೆ ಅಲ್ಲವೇ?" ಎಂದು ಫ್ರಾನ್ಸ್24 ನಿರೂಪಕರು ಪ್ರಶ್ನಿಸಿದ್ದಾರೆ.
ಆ ಚಾನಲ್ ನೀಡಿದ ಇನ್ನೊಂದು ನಿದರ್ಶನ ರಿಪಬ್ಲಿಕ್ ವರ್ಲ್ಡ್, ಟಿವಿ9ಭಾರತ್‍ವರ್ಷ್ ಮತ್ತು ಝೀ ಹಿಂದುಸ್ತಾನ್ ಪ್ರಸಾರ ಮಾಡಿದ ಹಾಗೂ ಅಫ್ಗಾನಿಸ್ತಾನದ ಪಂಜ್‍ಶಿರ್ ಎಂಬಲ್ಲಿ ಪಾಕಿಸ್ತಾನಿ ವಾಯುಪಡೆ ಹಾಗೂ ಅಫ್ಗಾನಿಸ್ತಾನದ ಪ್ರತಿರೋಧ ಪಡೆಗಳ ನಡುವಿನ ಸಂಘರ್ಷದ ವೀಡಿಯೋ ಆಗಿದೆ. ಆದರೆ ವಾಸ್ತವವಾಗಿ ಈ ದೃಶ್ಯಗಳು ವೀಡಿಯೋ ಗೇಮ್ ಅರ್ಮ-3 ದಿಂದಾಗಿತ್ತು.
ಟಿವಿ9ಭಾರತ್‍ವರ್ಷ್ ವಾಹಿನಿಯು ವೀಡಿಯೋ ಗೇಮ್ ದೃಶ್ಯಗಳನ್ನು ನಿಜ ಜೀವನ ದೃಶ್ಯವೆಂದು ಬಿಂಬಿಸಿರುವುದು ಇದೇ ಮೊದಲ ಬಾರಿಯಲ್ಲ ಎಂದು ಫ್ರಾನ್ಸ್24 ಹೇಳಿದೆ. "ಈ ಜನರು ಪತ್ರಕರ್ತರಿಗೆ ಕೆಟ್ಟ ಹೆಸರು ತರುತ್ತಿದ್ದಾರೆ" ಎಂದು ಕ್ರೀಡನ್ ಹೇಳಿದ್ದಾರೆ.







