ಬೆಂಗಳೂರು: ಶಾಲಾ ಶುಲ್ಕ ನಿಯಂತ್ರಣಕ್ಕೆ ಕಾಯ್ದೆ ರೂಪಿಸಲು ಆಗ್ರಹಿಸಿ ಪೋಷಕರಿಂದ ಧರಣಿ

ಬೆಂಗಳೂರು, ಅ.2: ಶಾಲಾ ಶುಲ್ಕ ನಿಯಂತ್ರಣಕ್ಕೆ ಕಾಯ್ದೆ ರೂಪಿಸಿ ಹಾಗೂ ಮೇಲುಸ್ತುವಾರಿ ಆಯೋಗ ರಚಿಸುವಂತೆ ಆಗ್ರಹಿಸಿ ಕರ್ನಾಟಕ ಖಾಸಗಿ ಶಾಲಾ ಪೋಷಕ ಸಂಘಟನೆಗಳ ಸಮನ್ವಯ ವೇದಿಕೆ ಮತ್ತು ವಾಯ್ಸ್ ಆಫ್ ಪೇರೆಂಟ್ಸ್ ಸಂಘಟನೆಯ ನೇತೃತ್ವದಲ್ಲಿಂದು ಬೆಂಗಳೂರಿನ ಮೌರ್ಯ ಸರ್ಕಲ್ ನಲ್ಲಿ ಧರಣಿ ನಡೆಯಿತು.
ಇತ್ತೀಚಿನ ದಶಕಗಳಲ್ಲಿ ಖಾಸಗೀ ಶಾಲೆಗಳು ಶಿಕ್ಷಣವನ್ನು ವ್ಯಾಪಾರೀಕರಣಗೊಳಿಸಿ ಮಾರುಕಟ್ಟೆಯ ಸರಕಾಗಿಸುತ್ತಿವೆ. ಅದು ಎಂಥಹ ಪರಿಸ್ಥಿತಿಗೆ ಬಂದಿದೆಯೆಂದರೆ, ರಾಜ್ಯದಲ್ಲಿ ಕೋವಿಡ್ ಮಹಾ ಸಾಂಕ್ರಾಮಿಕದಿಂದ ಮಕ್ಕಳು-ಪಾಲಕರು ಈ ಹಿಂದೆಂದೂ ಕಾಣದ ಸಂಕಷ್ಟ ಕಾಲದಲ್ಲಿದ್ದು ಪಡಬಾರದ ಬವಣೆ ಅನುಭವಿಸುತ್ತಿದ್ದರೂ ಖಾಸಗಿ ಶಿಕ್ಷಣ ಸಂಸ್ಥೆಗಳು ತಮ್ಮ ಲಾಭದ ದುರಾಸೆಗಾಗಿ ಮಕ್ಕಳನ್ನು-ಪಾಲಕರನ್ನು ಚಿತ್ರಹಿಂಸೆಗೆ ಒಳಪಡಿಸಿ ಶೋಷಿಸುತ್ತಿವೆ. ಆದ್ದರಿಂದ ಸರ್ಕಾರ ತಕ್ಷಣದಿಂದಲೇ ಖಾಸಗಿ ಶಾಲೆಗಳನ್ನು ನಿಯಂತ್ರಿಸಿ, ಸಾರ್ವಜನಿಕ ಹಿತಾಸಕ್ತಿಯನ್ನು ಕಾಪಾಡಬೇಕಿದೆ ಎಂದು ಧರಣಿನಿರತರು ಒತ್ತಾಯಿಸಿದರು.
ಶಿಕ್ಷಣವನ್ನು ವ್ಯಾಪರೀಕರಣಗೊಳಿಸದೆ ಸೇವಾ ದೃಷ್ಟಿಯಿಂದ ಲಾಭರಹಿತವಾಗಿ ಒದಗಿಸಲು ಸಂವಿಧಾನದ ಆಶಯದ ಅನ್ವಯ ಖಾಸಗಿ ಶಾಲೆಗಳ ಮೇಲೆ ಸಾಂವಿಧಾನಿಕ ನಿಯಂತ್ರಣ ಹೇರುವ ಮೂಲಕ ಖಾಸಗಿ ಶಾಲೆಗಳಲ್ಲಿ ಶುಲ್ಕವನ್ನು ನಿಯಂತ್ರಿಸಿ ಮೇಲುಸ್ತುವಾರಿ ನಡೆಸುವುದು ಅನಿವಾರ್ಯವಾಗಿದೆ. ಆದ್ದರಿಂದ ಖಾಸಗಿ ಶಾಲೆಗಳ ಶುಲ್ಕ ನಿಯಂತ್ರಣ ಹಾಗೂ ಮೇಲುಸ್ತುವಾರಿ ಆಯೋಗ/ಕಾನೂನು ರಚಿಸಬೇಕು ಎಂದು ಧರಣಿನಿರತರು ಸರಕಾರವನ್ನು ಒತ್ತಾಯಿಸಿದರು.
ಹಕ್ಕೊತ್ತಾಯಗಳು:
ಶಿಕ್ಷಣ ಇಲಾಖೆಯು ಈ ನಿಟ್ಟಿನಲ್ಲಿ ಮಾಡಿದ ಈವರೆಗಿನ ಪ್ರಯತ್ನಗಳು ಫಲ ನೀಡದಿರುವುದು. ಕಾರಣ, ಖಾಸಗಿ ಶಾಲೆಗಳ ಪ್ರಭಾವ ಬಲಿಷ್ಠವಾಗಿರುವುದರಿಂದ ಸುತ್ತೋಲೆ/ ಆದೇಶಗಳ ಮೂಲಕ ಬಗೆಹರಿಸುವುದು ಕಷ್ಟ ಸಾಧ್ಯ. ಇದಕ್ಕೆ ಒಂದು ಕಾನೂನಿನ ಅವಶ್ಯಕತೆಯಿದೆ.
ರಾಷ್ಟ್ರೀಯ ಶಿಕ್ಷಣ ನೀತಿ, ಶಿಕ್ಷಣದ ಖಾಸಗೀಕರಣ-ವ್ಯಾಪಾರೀಕರಣವನ್ನು ತಡೆಯಲು ನಿಯಂತ್ರಣಕ್ಕಾಗಿ ಸರಳ ಆದರೆ ಬಿಗಿಯಾದ ಕಾನೂನು ತರುವುದಾಗಿ ಪ್ರಸ್ತಾಪಿಸಿದೆ. ಇದು ಈ ಬಗೆಯ ಕಾನೂನನ್ನು ರಾಜ್ಯದಲ್ಲಿ ರೂಪಿಸಲು ನೀತಿಯ ಭಾಗವಾಗಿ ಬೆಂಬಲಕ್ಕೆ ಬರುತ್ತದೆ.
ಈಗಾಗಲೇ ಹಲವು ಪ್ರಕರಣಗಳಲ್ಲಿ ಸರ್ವೋಚ್ಚ ನ್ಯಾಯಾಲಯವು ಶಿಕ್ಷಣವು ಚಾರಿಟೆಬಲ್ ಡೊಮೈನ್ ನಲ್ಲಿದ್ದು ಕೇವಲ ಲಾಭಕ್ಕಾಗಿ ನಡೆಸುವಂತಿಲ್ಲ ಎಂದು ಪದೇ ಪದೇ ಪುನರುಚ್ಚರಿಸಿದೆ. ಈ ಎಲ್ಲ ಅಂಶಗಳನ್ನು ಹಿನ್ನೆಲೆಯಲ್ಲಿ, ಕರ್ನಾಟಕದಲ್ಲಿಯೂ ಶುಲ್ಕ ನಿಯಂತ್ರಣ ಕಾಯಿದೆಯನ್ನು ರೂಪಿಸಿ ಜಾರಿಗೊಳಿಸುವುದು ಖಾಸಗಿ ಶಾಲೆಯಲ್ಲಿ ಕಲಿಸುತ್ತಿರುವ ಮಕ್ಕಳಿಗೆ-ಪಾಲಕರಿಗೆ ನ್ಯಾಯ ಒದಗಿಸಲು ಸೂಕ್ತ ಕ್ರಮವಾಗುತ್ತದೆ.






.gif)
.gif)
.gif)
.gif)
.gif)
.gif)
.gif)

