ಅ.22ರಂದು ವಕ್ಫ್ ಬೋರ್ಡ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ

ಫೈಲ್ ಚಿತ್ರ
ಬೆಂಗಳೂರು, ಅ.1: ರಾಜ್ಯ ವಕ್ಫ್ ಬೋರ್ಡ್ ಅಧ್ಯಕ್ಷ ಸ್ಥಾನಕ್ಕೆ ಅ.22ರಂದು ಮಧ್ಯಾಹ್ನ 12 ಗಂಟೆಗೆ ನಗರದ ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿರುವ ವಕ್ಫ್ ಬೋರ್ಡ್ ಕೇಂದ್ರ ಕಚೇರಿಯಲ್ಲಿ ಚುನಾವಣೆ ನಿಗದಿಯಾಗಿದೆ.
ಚುನಾವಣಾ ಅಧಿಕಾರಿಯಾಗಿರುವ ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತರು ಈ ಚುನಾವಣೆ ನಡೆಸಲಿದ್ದಾರೆ. ಡಾ.ಮುಹಮ್ಮದ್ ಯೂಸುಫ್ ನಿಧನದಿಂದ ತೆರವಾಗಿರುವ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಹಾಲಿ ಒಟ್ಟು 10 ಸದಸ್ಯರು ವಕ್ಫ್ ಬೋರ್ಡ್ನಲ್ಲಿದ್ದು ಅವರ ಪೈಕಿ ಒಬ್ಬರನ್ನು ಅಧ್ಯಕ್ಷರಾಗಿ ಆಯ್ಕೆ ಮಾಡಬೇಕಿದೆ.
ಶಾಸಕ ತನ್ವೀರ್ ಸೇಠ್ ಹಾಗೂ ಮೌಲಾನ ಎನ್.ಕೆ.ಎಂ.ಶಾಫಿ ಸಅದಿ ವಕ್ಫ್ ಬೋರ್ಡ್ ಅಧ್ಯಕ್ಷ ಸ್ಥಾನಕ್ಕಾಗಿ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಇದಲ್ಲದೆ, ಮಾಜಿ ಅಧ್ಯಕ್ಷ ಆರ್.ಅಬ್ದುಲ್ ರಿಯಾಝ್ ಖಾನ್, ರಾಜ್ಯಸಭಾ ಸದಸ್ಯ ಡಾ.ಸೈಯದ್ ನಾಸೀರ್ ಹುಸೇನ್ ಅವರ ಅಧ್ಯಕ್ಷ ಸ್ಥಾನದ ಪರವಾಗಿ ಒಲವು ಹೊಂದಿದ್ದಾರೆ.
ಈ ಹಿಂದೆ ಸೆ.27ರಂದು ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಿಗದಿಯಾಗಿತ್ತು. ಆದರೆ, ಮುಹಮ್ಮದ್ ಯೂಸುಫ್ ಅವರ ಸದಸ್ಯ ಸ್ಥಾನ(ಮುತವಲ್ಲಿ ಕೋಟಾ)ಕ್ಕೆ ಚುನಾವಣೆ ಆಗದ ಹಿನ್ನೆಲೆಯಲ್ಲಿ ಮೊದಲು ಮುತವಲ್ಲಿ ಕೋಟಾದಲ್ಲಿ ಖಾಲಿಯಿರುವ ಸ್ಥಾನ ಭರ್ತಿ ಮಾಡಿ, ಆನಂತರ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸುವಂತೆ ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆಯ ಕಾರ್ಯದರ್ಶಿ ಪ್ರಾದೇಶಿಕ ಆಯುಕ್ತರಿಗೆ ಸೂಚನೆ ನೀಡಿದ್ದರು.
ಇದೀಗ ಪುನಃ ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆಯು ನೋಟಿಸ್ ಜಾರಿ ಅ.22ರಂದು ವಕ್ಫ್ ಬೋರ್ಡ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸುವಂತೆ ಪ್ರಾದೇಶಿಕ ಆಯುಕ್ತರಿಗೆ ಸೂಚನೆ ನೀಡಿದೆ.
ಮತದಾರರು: ರಾಜ್ಯಸಭಾ ಸದಸ್ಯ ಡಾ.ಸೈಯದ್ ನಾಸೀರ್ ಹುಸೇನ್, ಶಾಸಕರಾದ ತನ್ವೀರ್ ಸೇಠ್, ಕನೀಝ್ ಫಾತಿಮಾ, ಬಾರ್ ಕೌನ್ಸಿಲ್ ಸದಸ್ಯ ಕೋಟಾದಡಿ ಆಯ್ಕೆಯಾದ ಅಸೀಫ್ ಅಲಿ ಶೇಕ್ ಹುಸೇನ್, ಬಾರ್ ಕೌನ್ಸಿಲ್ ಮಾಜಿ ಸದಸ್ಯ ಕೋಟಾದಡಿಯಲ್ಲಿ ಆಯ್ಕೆಯಾದ ಆರ್.ಅಬ್ದುಲ್ ರಿಯಾಝ್ ಖಾನ್, ಮುತವಲ್ಲಿ ಕೋಟಾದಡಿ ಚುನಾಯಿತರಾಗಿರುವ ಕೆ.ಅನ್ವರ್ ಬಾಷ, ಮುಸ್ಲಿಮ್ ವಿದ್ವಾಂಸ(ಸುನ್ನಿ) ಮೌಲಾನ ಎನ್.ಕೆ.ಮುಹಮ್ಮದ್ ಶಾಫಿ ಸಅದಿ, ಮುಸ್ಲಿಮ್ ವಿದ್ವಾಂಸ(ಶಿಯಾ) ಮೀರ್ ಅಝರ್ ಹುಸೇನ್, ಸರಕಾರದ ಅಧಿಕಾರಿ ಖಾಝಿ ನಫೀಸಾ ಹಾಗೂ ಸಾಮಾಜಿಕ ಕಾರ್ಯಕರ್ತ ಜಿ.ಯಾಕೂಬ್ ವಕ್ಫ್ ಸದಸ್ಯರಾಗಿದ್ದು, ಮತದಾನದ ಹಕ್ಕು ಹೊಂದಿದ್ದಾರೆ.







