ಎನ್ ಕೌಂಟರ್ ಪ್ರಕರಣ: ಉತ್ತರಪ್ರದೇಶ ಸರಕಾರಕ್ಕೆ 7 ಲಕ್ಷ ರೂ. ದಂಡ ವಿಧಿಸಿದ ಸುಪ್ರೀಂಕೋರ್ಟ್
"ಪೊಲೀಸ್ ಅಧಿಕಾರಿಗಳನ್ನು ರಕ್ಷಿಸಲು ಆಡಳಿತ ಪ್ರಯತ್ನಿಸುತ್ತಿದೆ"

ಲಕ್ನೋ: ರಾಜ್ಯದಲ್ಲಿ 2002ರಲ್ಲಿ ನಡೆದ ಎನ್‍ಕೌಂಟರ್ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ರಾಜ್ಯ ಸರಕಾರದ ಮೇಲೆ ಸುಪ್ರೀಂ ಕೋರ್ಟ್ ರೂ 7 ಲಕ್ಷ ದಂಡ ವಿಧಿಸಿದೆಯಲ್ಲದೆ ತನ್ನ ಪೊಲೀಸ್ ಅಧಿಕಾರಿಗಳನ್ನು ರಕ್ಷಿಸಲು ಯತ್ನಿಸಿದ್ದಕ್ಕಾಗಿ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದೆ.
"ಎನ್‍ಕೌಂಟರ್‍ನಲ್ಲಿ ಸತ್ತ ವ್ಯಕ್ತಿಯ ತಂದೆಯೇ ಅರ್ಜಿದಾರರಾಗಿದ್ದು ಕಳೆದ 19 ವರ್ಷಗಳಿಂದ ನ್ಯಾಯಕ್ಕಾಗಿ ಅಲೆದಾಡುತ್ತಿದ್ದಾರೆ" ಎಂದು ಸುಪ್ರೀಂ ಕೋರ್ಟ್ ಹೇಳಿದೆ. "ಈ ಪ್ರಕರಣದಲ್ಲಿ ರಾಜ್ಯ ಸರಕಾರ ತೋರಿರುವ ನಿರ್ಲಕ್ಷ್ಯವು ತನ್ನ ಪೊಲೀಸ್ ಅಧಿಕಾರಿಗಳನ್ನು ರಕ್ಷಿಸಲು ಆಡಳಿತ ಎಷ್ಟು ಪ್ರಯತ್ನಿಸುತ್ತಿದೆ ಎಂಬುದನ್ನು ತೋರಿಸುತ್ತದೆ" ಎಂದೂ ನ್ಯಾಯಾಲಯ ಹೇಳಿದೆ.
ಈ ಪ್ರಕರಣದ ತನಿಖೆಯನ್ನು 2005ರಲ್ಲಿ ಅಂತ್ಯಗೊಳಿಸಿದ್ದ ಪೊಲೀಸರು ತಮ್ಮದೇ ಇಲಾಖೆಯ ಅಧಿಕಾರಿಗಳ ವಿರುದ್ಧದ ಆರೋಪಗಳನ್ನು ವಜಾಗೊಳಿಸಿದ್ದರು. ವಿಚಾರಣಾ ನ್ಯಾಯಾಲಯ ಪೊಲೀಸರ ಕ್ರಮವನ್ನು ತಿರಸ್ಕರಿಸಿದ್ದರೂ ಯಾವುದೇ ಬಂಧನಗಳು ನಡೆದಿರಲಿಲ್ಲ. ನ್ಯಾಯಾಲಯವೊಂದು ಆರೋಪಿಗಳಲ್ಲೊಬ್ಬಾತನ ಬಂಧನಕ್ಕೂ ತಡೆ ಹೇರಿತ್ತು.
ವಿಚಾರಣಾ ನ್ಯಾಯಾಲಯವು 2018ರಲ್ಲಿ ಆರೋಪಿ ಅಧಿಕಾರಿಗಳ ವೇತನ ತಡೆಹಿಡಿಯಬೇಕೆಂದು ಸೂಚಿಸಿದ್ದರೂ ಒಂದು ಅಧಿಕಾರಿಗೆ ಸಂಬಂಧಿಸಿದಂತೆ ಮಾತ್ರ ಈ ಕ್ರಮಕೈಗೊಳ್ಳಲಾಗಿತ್ತ ಎಂದು ಗುರುವಾರದ ವಿಚಾರಣೆ ವೇಳೆ ನ್ಯಾಯಮೂರ್ತಿಗಳಾದ ವಿನೀತ್ ಸರನ್ ಮತ್ತು ಅನಿರುದ್ಧ ಬೋಸ್ ಅವರ ಪೀಠ ಗಣನೆಗೆ ತೆಗೆದುಕೊಂಡಿದೆ. ನಾಲ್ಕನೇ ಆರೋಪಿ 2019ರಲ್ಲಿ ನಿವೃತ್ತನಾದಾಗ ಆತನಿಗೆ ಸಲ್ಲಬೇಕಾದ ಎಲ್ಲಾ ಸವಲತ್ತು ಹಾಗೂ ಬಾಕಿಗಳನ್ನು ಪಾವತಿಸಲಾಗಿತ್ತು ಎಂಬುದೂ ನ್ಯಾಯಾಲಯದ ಗಮನಕ್ಕೆ ಬಂದಿದೆ.
"ಮೃತ ವ್ಯಕ್ತಿಯ ತಂದೆ ಸಲ್ಲಿಸಿದ್ದ ಅರ್ಜಿಯನ್ನಾಧರಿಸಿ ಈ ನ್ಯಾಯಾಲಯ ಸೆಪ್ಟೆಂಬರ್ 1, 2021ರಂದು ನೋಟಿಸ್ ಜಾರಿಗೊಳಿಸಿದ ನಂತರವಷ್ಟೇ ಘಟನೆ ನಡೆದು 19 ವರ್ಷಗಳ ನಂತರ ಇಬ್ಬರು ಆರೋಪಿಗಳ ಬಂಧನವಾಗಿತ್ತು ಹಾಗೂ ಒಬ್ಬಾತ ಶರಣಾಗಿದ್ದ, ನಾಲ್ಕನೇ ಆರೋಪಿ ಇನ್ನೂ ತಲೆಮರೆಸಿಕೊಂಡಿದ್ದಾನೆ" ಎಂದು ನ್ಯಾಯಾಲಯ ಹೇಳಿದೆ.
ರಾಜ್ಯ ಸರಕಾರವನ್ನು ಪ್ರತಿನಿಧಿಸುತ್ತಿರುವ ಹೆಚ್ಚುವರಿ ಅಡ್ವಕೇಟ್ ಜನರಲ್ ಎಸ್ ಗರಿಮಾ ಪ್ರಸಾದ್ ಪ್ರತಿಕ್ರಿಯಿಸಿ, ವಿಚಾರಣಾ ನ್ಯಾಯಾಲಯದ ಆದೇಶವನ್ನು ಏಕೆ ಪಾಲಿಸಿಲ್ಲ ಎಂದು ತಿಳಿಯಲು ಸರಕಾರ ತನಿಖೆ ಆರಂಭಿಸಿದೆ ಎಂದು ತಿಳಿಸಿದರು. ಮುಂದಿನ ವಿಚಾರಣೆ ಅಕ್ಟೋಬರ್ 20ರಂದು ನಡೆಯಲಿದೆ.







