ಅ.7ರಿಂದ ಮಂಗಳೂರು ದಸರಾ ಮಹೋತ್ಸವ
‘ನಮ್ಮ ದಸರಾ- ನಮ್ಮ ಸುರಕ್ಷೆ’ ಘೋಷವಾಕ್ಯದಡಿ ಸಿದ್ಧತೆ ಆರಂಭ

ಮಂಗಳೂರು, ಅ.2: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ವತಿಯಿಂದ ನಡೆಯುವ ಮಂಗಳೂರು ದಸರಾ ಈ ಬಾರಿಯೂ ಕಳೆದ ಬಾರಿಯಂತೆ ಕೋವಿಡ್ ಮಾರ್ಗಸೂಚಿಗಳೊಂದಿಗೆ ಅ. 7ರಿಂದ ಅ.16ರವರೆಗೆ ನಡೆಸಲು ಸಿದ್ಧತೆ ನಡೆಸಲಾಗಿದೆ.
ಕ್ಷೇತ್ರದ ನವೀಕರಣದ ರುವಾರಿ ಜನಾರ್ದನ ಪೂಜಾರಿಯವರ ಮಾರ್ಗದರ್ಶದಂತೆ, ‘‘ನಮ್ಮ ದಸರಾ ನಮ್ಮ ಸುರಕ್ಷೆ’’ ಎಂಬ ಘೋಷವಾಕ್ಯದಡಿ ಈ ಬಾರಿಯ ದಸರಾ ಕಾರ್ಯಕ್ರಮ ನಡೆಯಲಿದ್ದು, ಶಾರದಾ ಮೂರ್ತಿಯ ವಿಸರ್ಜನೆಯ ದಿನದಂದು ದಸರಾ ಮೆರವಣಿಗೆ ಹೊರತುಪಡಿಸಿ ಉಳಿದೆಲ್ಲಾ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಎಂದು ಕ್ಷೇತ್ರಾಡಳಿತ ಮಂಡಳಿಯ ಅಧ್ಯಕ್ಷ ಎಚ್.ಎಸ್. ಸಾಯಿರಾಂ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದರು.
ಸರಕಾರದ ಆದೇಶದ ಹಿನ್ನೆಲೆಯಲ್ಲಿ ಈ ಬಾರಿಯೂ ದಸರಾವನ್ನು ಮಾರ್ಗಸೂಚಿಗಳೊಂದಿಗೆ ನಡೆಸುವಂತೆ ಜಿಲ್ಲಾಧಿಕಾರಿಯವರನ್ನು ಭೇಟಿಯಾದ ಕ್ಷೇತ್ರಾಡಳಿತ ಮಂಡಳಿಯ ಸದಸ್ಯರಿಗೆ ಸಲಹೆ ನೀಡಿದ್ದಾರೆ. ಆ ಹಿನ್ನೆಲೆಯಲ್ಲಿ ಕ್ಷೇತ್ರದಲ್ಲಿ ನವದುರ್ಗೆಯರ ಸ್ಥಾಪನೆ, ಅನ್ನಸಂತರ್ಪಣೆ ಹೊರತಾಗಿ ಕಳೆದ ಬಾರಿಯಂತೆ ಪ್ರಸಾದ ರೂಪದಲ್ಲಿ ಅನ್ನ ವಿತರಣೆ ಹಾಗೂ ರಾಜಬೀದಿಗಳ ಅಲಂಕಾರ ವಿಶೇಷವಾಗಿ ನಡೆಯಲಿದೆ ಎಂದು ಅವರು ಹೇಳಿದರು.
ಅ.7ರಂದು ಮಹಾನವಮಿ ಉತ್ಸವ ಆರಂಭದೊಂದಿಗೆ ಕ್ಷೇತ್ರದಲ್ಲಿ ಬೆಳಗ್ಗೆ 9 ಗಂಟೆಗೆ ಗುರುಪ್ರಾರ್ಥನೆ 11.30ಕ್ಕೆ ಕಲಸಪ್ರತಿಷ್ಠೆ ಹಾಗೂ 11.40ಕ್ಕೆ ನವದುರ್ಗೆಯರ ಮತ್ತು ಶಾರದಾ ಪ್ರತಿಷ್ಠೆ ನಡೆಯಲಿದೆ. ನಿತ್ಯ ವವಿಶೇಷ ಪೂಜೆಗಳು ನೆರವೇರಲಿದೆ. ಅ. 15ರಂದು ಮಹಾಪೂಜೆ ನಡೆದು ರಾತ್ರಿ 8ರಿಂದ ಕ್ಷೇತ್ರದೊಳಗೆ ಸರಳ ಮೆರವಣಿಗೆಯೊಂದಿಗೆ ಶಾರದಾ ವಿಸರ್ಜನೆ ನಡೆಸಲಾಗುವುದು ಎಂದು ಅವರು ವಿವರಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮ ನೇರ ಪ್ರಸಾರ
ಈ ಬಾರಿಯೂ ಕ್ಷೇತ್ರದಲ್ಲಿ ದಸರಾ ಅಂಗಾಗಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳ ವರ್ಚುವಲ್ ಪ್ರಸಾರ, ಸ್ಥಳೀಯ ಟಿವಿ ಚಾನೆಲ್‌ಗಳ ಮೂಲಕ ನೇರ ಪ್ರಸಾರ ಮೂಲಕ ಜನರಿಗೆ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗುತ್ತದೆ ಎಂದು ಕ್ಷೇತ್ರಾಡಳಿತ ಮಂಡಳಿಯ ಕೋಶಾಧಿಕಾರಿ ಪದ್ಮರಾಜ್ ಆರ್. ತಿಳಿಸಿದರು.
ರಾಜಬೀದಿಯ ವಿದ್ಯುದ್ದೀಪಾಲಂಕಾರಕ್ಕೆ ವ್ಯವಸ್ಥೆ: ಮನಪಾಕ್ಕೆ ಕೃತಜ್ಞತೆ
ಮಂಗಳೂರು ದಸರಾ ಮಹೋತ್ಸವದ ಅಂಗವಾಗಿ ನಗರದ ರಾಜಬೀದಿಯಲ್ಲಿ ವಿದ್ಯುದ್ದೀಪಾಲಂಕಾರಕ್ಕೆ ಮಂಗಳೂರು ಮಹಾನಗರ ಪಾಲಿಕೆಯಿಂದ ವ್ಯವಸ್ಥೆಗೆ ಪಾಲಿಕೆಯ ಸರ್ವಸದಸ್ಯರೂ ಸಮ್ಮತಿಸಿರುವುದು ಹಾಗೂ ಇದಕ್ಕೆ ಸಹಕರಿಸಿರುವ ಜನಪ್ರತಿನಿಧಿಗಳಿಗೆ ಕೃತಜ್ಞತೆ ಸಲ್ಲಿಸುವುದಾಗಿ ದೇವಸ್ಥಾನ ಅಭಿವೃದ್ಧಿ ಸಮಿತಿಯ ಸದಸ್ಯರಾದ ಹರಿಕೃಷ್ಣ ಬಂಟ್ವಾಳ ತಿಳಿಸಿದರು.
ಗೋಷ್ಠಿಯಲ್ಲಿ ಕ್ಷೇತ್ರಾಡಳಿತ ಮಂಡಳಿಯ ಉಪಾಧ್ಯಕ್ಷೆ ಉರ್ಮಿಳಾ ರಮೇಶ್, ಕಾರ್ಯದರ್ಶಿ ಮಾಧವ ಸುವರ್ಣ, ಸದಸ್ಯರಾದ ರವಿಶಂಕರ ಮಿಜಾರು, ಮಹೇಶ್ಚಂದ್ರ, ಎಂ. ಶೇಕರ್ ಪೂಜಾರಿ, ಸಂತೋಷ್ ಕುಮಾರ್, ಜಗದೀಪ್ ಡಿ. ಸುವರ್ಣ, ದೇವಸ್ಥಾನ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ದೇವೇಂದ್ರ ಪೂಜಾರಿ, ಡಾ. ಬಿ.ಜಿ. ಸುವರ್ಣ, ಸದಸ್ಯರಾದ ರಾಧಾಕೃಷ್ಣ, ಜತಿನ್ ಅತ್ತಾವರ, ಲೀಲಾಕ್ಷ ಕರ್ಕೇರ, ಚಂದನ್‌ದಾಸ್, ಗೌರವಿ ಪಿ.ಕೆ., ಕಿಶೋರ್ ದಂಡಕೇರಿ ಮೊದಲಾದವರು ಉಪಸ್ಥಿತರಿದ್ದರು.









