ಬೆಳಗಾವಿಯಲ್ಲಿ ಯುವಕನ ಕೊಲೆ: ಯುವತಿಯ ಜೊತೆ ಪ್ರೇಮಸಂಬಂಧ ಹತ್ಯೆಗೆ ಕಾರಣ?
ರಾಮಸೇನಾ ಕಾರ್ಯಕರ್ತ ಮಹಾರಾಜ್, ಯುವತಿಯ ತಂದೆ ಸಹಿತ ಮೂವರ ವಿರುದ್ಧ ದೂರು ನೀಡಿದ ಮೃತ ತಾಯಿ

ಅರ್ಬಾಝ್ ಮುಲ್ಲಾ
ಬೆಳಗಾವಿ, ಅ.2: ಬೆಳಗಾವಿ ರೈಲ್ವೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 24 ವರ್ಷ ವಯಸ್ಸಿನ ಯುವಕನೊಬ್ಬ ಬೆಳಗಾವಿ ರೈಲ್ವೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕೊಲೆಯಾದ ಘಟನೆ ಮಂಗಳವಾರ ನಡೆದಿದೆ. ಮೃತ ಯುವಕನನ್ನು ಖಾನಾಪುರ ನಿವಾಸಿ ಅರ್ಬಾಝ್ ಅಫ್ತಾಬ್ ಮುಲ್ಲಾ (24) ಎಂದು ಗುರುತಿಸಲಾಗಿದೆ.
ರಾಮಸೇನಾ ಕಾರ್ಯಕರ್ತ ಮಹಾರಾಜ್ ಹಾಗೂ ಇತರ ಇಬ್ಬರು ತನ್ನ ಪುತ್ರನನ್ನು ಕೊಲೆಗೈದಿರುವುದಾಗಿ ಅರ್ಬಾಝ್ ನ ತಾಯಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ. ತನ್ನ ಪುತ್ರನ ಜೊತೆ ಪ್ರೇಮ ಸಂಬಂಧವನ್ನು ಹೊಂದಿದ್ದಳೆನ್ನಲಾದ ಶ್ವೇತಾ ಎಂಬ ಯುವತಿಯ ತಂದೆ ಸೇರಿದಂತೆ ಇತರ ಇಬ್ಬರನ್ನು ಕೂಡಾ ಆಕೆ ದೂರಿನಲ್ಲಿ ಹೆಸರಿಸಿದ್ದಾರೆ.
ಅಂತರಧರ್ಮೀಯ ಪ್ರೇಮಸಂಬಂಧದ ಕಾರಣಕ್ಕಾಗಿ ತನ್ನ ಪುತ್ರನನ್ನು, ಶ್ವೇತಾಳ ಕುಟುಂಬಿಕರು ಕೊಲೆ ಮಾಡಿದ್ದಾರೆಂದು ನಝೀಮಾ ಶೇಖ್ ಆಪಾದಿಸಿದ್ದಾರೆ. ಯುವತಿಯ ಜೊತೆ ಗಿನ ಗೆಳೆತನಕ್ಕಾಗಿ ಅರ್ಬಾಝ್ ಗೆ ಮಹಾರಾಜ್ ಮತ್ತಿತರರಿಂದ ಬೆದರಿಕೆ ಕರೆಗಳು ಬರುತ್ತಿದ್ದವು. ಈ ಮಧ್ಯೆ ಯುವತಿ ಕೂಡಾ ತನಗೆ ವಿವಾಹಕ್ಕಾಗಿ ಶ್ರೀಮಂತ ಕುಟುಂಬಗಳಿಂದ ಪ್ರಸ್ತಾವನೆಗಳು ಬರುತ್ತಿರುವುದರಿಂದ ತನ್ನೊಂದಿಗೆ ಪ್ರೇಮಸಂಬಂಧ ಕಡಿದುಕೊಳ್ಳುವಂತೆ ಶ್ವೇತಾ ಕೂಡಾ ಅರ್ಬಾಝ್ ಗೆ ತಿಳಿಸಿದ್ದಳು ಎಂದು ನಝೀಮಾ ದೂರಿನಲ್ಲಿ ತಿಳಿಸಿದ್ದಾರೆ.
ಕಳೆದ ರವಿವಾರ ಅರ್ಬಾಝ್ ಹಾಗೂ ತನ್ನನ್ನು ಮಹಾರಾಜ್ ನಿರ್ಜನ ಸ್ಥಳವೊಂದಕ್ಕೆ ಕರೆಸಿಕೊಂಡಿದ್ದ. ಶ್ವೇತಾಳ ಎಲ್ಲಾ ಸಂಪರ್ಕ ವಿವರಗಳನ್ನು ಹಾಗೂ ಚಿತ್ರಗಳನ್ನು ಅಳಿಸಿಹಾಕುವಂತೆ ತಮಗೆ ಬೆದರಿಕೆಯೊಡ್ಡಿದ್ದ ಮತ್ತು ತಮ್ಮಿಂದ ಹಣಕ್ಕಾಗಿ ಬೇಡಿಕೆಯಿಟ್ಟಿದ್ದನೆಂದು ನಝೀಮಾ ದೂರಿನಲ್ಲಿ ಆಪಾದಿಸಿದ್ದಾರೆ.
ತನ್ನ ವಿರುದ್ಧ ಈಗಾಗಲೇ 40 ಪ್ರಕರಣಗಳು ದಾಖಲಾಗಿದ್ದು ಇನ್ನೊಂದು ಹೊಸ ಪ್ರಕರಣ ದಾಖಲಾಗುವ ಬಗ್ಗೆ ತನಗೆ ಚಿಂತೆಯಿಲ್ಲ ಎಂದು ಮಹಾರಾಜ್ ತಮಗೆ ತಿಳಿಸಿದ್ದ. ಒಂದು ವೇಳೆ ಹಣವನ್ನು ನೀಡದೆ ಇದ್ದಲ್ಲಿ ನಮ್ಮಿಬ್ಬರ ಮುಖದ ಮೇಲೂ ಆ್ಯಸಿಡ್ ದಾಳಿ ನಡೆಸುವುದಾಗಿಯೂ ಆತ ಬೆದರಿಕೆಯೊಡ್ಡಿದ್ದ. ‘ ನಾನು ಆಗ ನಗದು ಹಣವನ್ನು ತಂದಿರಲಿಲ್ಲ. ಹೀಗಾಗಿ ನಾನು ಯುಪಿಐ ಮೂಲಕ ಹಣ ಪಾವತಿಸುವುದಾಗಿ ತಿಳಿಸಿದ್ದೆ. ಅದಕ್ಕೆ ಆತ ಒಪ್ಪರಲಿಲ್ಲ. ಹಲವಾರು ನಿಮಿಷಗಳ ಕಾಲ ಗೋಗರೆದ ಬಳಿಕ ತಮಗೆ ಅಲ್ಲಿಂದ ಹೊರಬರಲು ಸಾಧ್ಯವಾಯಿತು’’ ಎಂದು ನಝೀಮಾ ತಿಳಿಸಿದ್ದಾರೆ.
‘‘ ನನ್ನ ಮಗಳು ಬ್ರಿಟನ್ ನಲ್ಲಿ ನೆಲೆಸಿದ್ದು, ನನ್ನ ಪ್ರಯಾಣದ ಯೋಜನೆಗಳಿಗೆ ಸಂಬಂಧಿಸಿದ ಕೆಲವೊಂದು ದಾಖಲೆಪತ್ರಗಳನ್ನು ಸಿದ್ಧಪಡಿಸಲು ನಾನು ಪರ ಊರಿಗೆ ಹೋಗಿದ್ದೆ. ನಾನು ಮನೆಗೆ ಹಿಂತಿರುಗಿದಾಗ ಆರ್ಬಾಝ್ ಮನೆಯಿಂದ ನಾಪತ್ತೆಯಾಗಿದ್ದ. ಆಗ ನನಗೆ ಯಾರೋ ಒಬ್ಬರು ಕರೆ ಮಾಡಿ, ನನ್ನ ಪುತ್ರನ ಮೊಬೈಲ್ ಸಿಕ್ಕಿರುವುದಾಗಿ ಹೇಳಿದ್ದರು. ತದನಂತರ ಆತನ ಶವ ಪತ್ತೆಯಾಗಿತ್ತು. ಆತನನ್ನು ಹತ್ಯೆ ಮಾಡಲಾಗಿದೆ. ಆತನ ಕೈಗಳು ಮತ್ತು ಕಾಲುಗಳನ್ನು ಕಟ್ಟಿ ಬರ್ಬರವಾಗಿ ಕೊಲೆಗೈಯಲಾಗಿದೆ ಎಂದು ದುಃಖತಪ್ತ ನಝೀಮಾ ಅವರು ‘ವಾರ್ತಾಭಾರತಿ’ ಪತ್ರಿಕೆಗೆ ದೂರವಾಣಿ ಮೂಲಕ ತಿಳಿಸಿದ್ದಾರೆ.
‘‘ ನನ್ನ ಪುತ್ರ ಶ್ವೇತಾಳನ್ನು ತೀವ್ರವಾಗಿ ಪ್ರೀತಿಸುತ್ತಿದ್ದುದರಿಂದ ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ಕೆಲವರು ಹೇಳುತ್ತಾರೆ. ಒಂದು ವೇಳೆ ಅದು ಅದು ಆತ್ಮಹತ್ಯೆಯಾಗಿದ್ದಲ್ಲಿ ಆತನ ಕೈ ಹಾಗೂ ಕಾಲುಗಳು ಯಾಕೆ ಕಟ್ಟಿಹಾಕಲ್ಪಟ್ಟಿದ್ದವು’’ ಎಂದು ಪ್ರಶ್ನಿಸುವ ನಝೀಮಾ, ತನ್ನ ಪುತ್ರನ ಸಾವಿಗೆ ನ್ಯಾಯ ದೊರೆಯಬೇಕೆಂದು ಆಗ್ರಹಿಸಿದ್ದಾರೆ.
ನಝೀಮಾ ಅವರ ದೂರನ್ನು ಆಧರಿಸಿ ಪೊಲೀಸರು ಮಹಾರಾಜ್, ಶ್ವೇತಾ ಅವರ ತಂದೆ ಕುಂಬಾರ್ ಹಾಗೂ ಬಿರ್ಜೆ ಎಂಬವರನ್ನು ಎಫ್ಐಆರ್ನಲ್ಲಿ ಹೆಸರಿಸಿದ್ದಾರೆ. ಆದರೆ ಈ ಮೂವರ ವಿರುದ್ಧ ಅವರು ಈತನಕ ಯಾವುದೇ ಕ್ರಮವನ್ನು ಕೈಗೊಂಡಿಲ್ಲವೆಂದು ತಿಳಿದುಬಂದಿದೆ.
ಪ್ರಕರಣಕ್ಕೆ ಸಂಬಂಧಿ ಪೊಲೀಸರು ಈವರೆಗೆ ಕೈಗೊಂಡಿರುವ ಕ್ರಮಗಳು ಹಾಗೂ ತನಿಖೆಯ ವಿಚಾರಣೆಯಲ್ಲಿ ಅವರಿಂದಾಗಿರುವ ಲೋಪಗಳು ಬಗ್ಗೆ ಹೆಚ್ಚಿನ ವಿವರಗಳನ್ನು ಪಡೆಯಲು ವಾರ್ತಾ ಭಾರತಿ ಯತ್ನಿಸಿತ್ತು. ಆದರೆ ತಾಂತ್ರಿಕ ಅಂಶಗಳನ್ನು ಉಲ್ಲೇಖಿಸಿ ತನಿಖೆಯ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಲು ರೈಲ್ವೆ ಪೊಲೀಸ್ ಠಾಣೆಯ ಎಸ್ಎಚ್ಓ ಅವರು ನಿರಾಕರಿಸಿದ್ದಾರೆ. ಅತಿ ಶೀಘ್ರದಲ್ಲೇ ಪ್ರಕರಣ ಹಾಗೂ ತನಿಖೆಯ ಬಗ್ಗೆ ವಿವರಗಳನ್ನು ನೀಡುವುದಾಗಿ ಅವರು ತಿಳಿಸಿದ್ದಾರೆ.







