ಒಂದೇ ಕುಟುಂಬದ ಐವರ ಆತ್ಮಹತ್ಯೆ ಪ್ರಕರಣ: ನ್ಯಾಯಾಂಗ ಬಂಧನಕ್ಕೆ ಮೂವರು ಆರೋಪಿಗಳು

ಬೆಂಗಳೂರು, ಅ.2: ನಗರದ ಬ್ಯಾಡರಹಳ್ಳಿಯಲ್ಲಿ ಒಂದೇ ಕುಟುಂಬದ ಐವರ ಸಾವು ಪ್ರಕರಣದ ಆರೋಪದಡಿ ಶಂಕರ್ ಮತ್ತು ಇಬ್ಬರು ಅಳಿಯಂದಿರನ್ನು ವಶಕ್ಕೆ ಪಡೆದಿರುವ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಬ್ಯಾಡರಹಳ್ಳಿ ಠಾಣೆ ಪೊಲೀಸರು ಶಂಕರ್ ಮತ್ತು ಅಳಿಯಂದಿರಾದ ಪ್ರವೀಣ್, ಶ್ರೀಕಾಂತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ನ್ಯಾಯಾಧೀಶರು ಈ ಮೂವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಆತ್ಮಹತ್ಯೆಗೂ ಮುನ್ನ ಶಂಕರ್ ಅವರ ಮೂವರು ಮಕ್ಕಳು ಬರೆದಿದ್ದ ಡೆತ್‍ನೋಟ್‍ನಲ್ಲಿರುವ ಅಂಶಗಳನ್ನು ಆಧರಿಸಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಬ್ಯಾಡರಹಳ್ಳಿ ಠಾಣೆ ಪೊಲೀಸರು ದಾಖಲಿಸಿಕೊಂಡಿದ್ದ ಪ್ರಕರಣದಲ್ಲಿ ಐದು ಮಂದಿಯ ಹೆಸರಿದೆ.
ಮನೆ ಯಜಮಾನ ಶಂಕರ್, ಅಳಿಯಂದಿರಾದ ಪ್ರವೀಣ್, ಶ್ರೀಕಾಂತ್ ಅವರ ತಂದೆ-ತಾಯಿಯ ಹೆಸರನ್ನು ಪ್ರಕರಣದಲ್ಲಿ ಉಲ್ಲೇಖವಾಗಿದೆ. ಇದೀಗ ಮೂವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ಎರಡು ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದೆ.
ಇದೀಗ ಪ್ರವೀಣ್ ಅವರ ತಂದೆ-ತಾಯಿಯನ್ನು ಬ್ಯಾಡರಹಳ್ಳಿ ಠಾಣೆ ಪೊಲೀಸರು ಕರೆತಂದು ವಿಚಾರಣೆ ನಡೆಸಿ ಹಲವು ಮಾಹಿತಿಗಳನ್ನು ಪಡೆದುಕೊಂಡಿದ್ದಾರೆ. ಶಂಕರ್ ಅವರಿಗೆ ಐವರು ಮಹಿಳೆಯರೊಂದಿಗೆ ಸಂಪರ್ಕವಿರುವುದು ಪೊಲೀಸರ ತನಿಖೆಯಿಂದ ಗೊತ್ತಾಗಿದೆ. ಇದೀಗ ಆ ಮಹಿಳೆಯರನ್ನು ಪತ್ತೆಹಚ್ಚಿ ವಿಚಾರಣೆಗೊಳಪಡಿಸುವ ಸಾಧ್ಯತೆಯಿದೆ.







