ಗಂಗೊಳ್ಳಿಯಲ್ಲಿ ಕೋಮು ಗಲಭೆ ಹುನ್ನಾರದೊಂದಿಗೆ ಜಾಥಾ ನಡೆಸಿವರ ವಿರುದ್ಧ ಕ್ರಮಕ್ಕೆ ಎಸ್‌ಡಿಪಿಐ ಆಗ್ರಹ
ಉಡುಪಿ, ಅ.2: ಗಂಗೊಳ್ಳಿಯಲ್ಲಿ ಗೋಹತ್ಯೆಯ ಆರೋಪಿಗಳನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆಂಬ ವಿಚಾರವನ್ನು ಮುಂದಿಟ್ಟು ಕೊಂಡು ಸಾವಿರಕ್ಕೂ ಮಿಕ್ಕಿ ಜನರನ್ನು ಸೇರಿಸಿ, ಕೋವಿಡ್ ನಿಯಮವನ್ನು ಸಂಪೂರ್ಣ ಗಾಳಿಗೆ ತೂರಿ ಕೋಮು ಗಲಭೆ ಸೃಷ್ಟಿಸುವ ಹುನ್ನಾರ ದೊಂದಿಗೆ, ಪೈಗಂಬರರನ್ನು, ಮುಸಲ್ಮಾನರನ್ನು ಅವಹೇಳನ ಮಾಡಿ ಘೋಷಣೆ ಕೂಗಿ ಜಾಥ ನಡೆಸಿದವರ ವಿರುದ್ದ ಕೂಡಲೇ ಕಾನೂನು ಕ್ರಮ ಕೈಗೊಳ್ಳದಿದ್ದಲ್ಲಿ ಜಿಲ್ಲಾದ್ಯಂತ ಉಗ್ರ ಹೋರಾಟಕ್ಕೆ ಕರೆ ನೀಡಲಾಗುವುದು ಎಂದು ಎಸ್‌ಡಿಪಿಐ ಉಡುಪಿ ಜಿಲ್ಲಾಧ್ಯಕ್ಷ ನಝೀರ್ ಅಹ್ಮದ್ ಎಚ್ಚರಿಕೆ ನೀಡಿದ್ದಾರೆ.
ಈ ರೀತಿ ಜಾಥಾ ನಡೆಸಿದರೂ ಪೋಲಿಸರು ಮಾತ್ರ ಮೂಖ ಪ್ರೇಕ್ಷಕರಂತೆ ವರ್ತಿಸಿರುವುದು ಖಂಡನೀಯ. ಆದರೆ ಕೆಲ ದಿನಗಳ ಹಿಂದೆ ಉಡುಪಿ ಯಲ್ಲಿ ಅತ್ಯಾಚಾರ ಪ್ರಕರಣ ಖಂಡಿಸಿ ಎಲ್ಲ ರೀತಿಯ ಕೋವಿಡ್ ನಿಯಮಗಳನ್ನು ಪಾಲಿಸಿಕೊಂಡು ನಡೆಸಿದ ಪ್ರತಿಭಟನಾ ಸಭೆಯನ್ನು ತಡೆದು ಪೋಲಿಸರು 35ಕ್ಕೂ ಹೆಚ್ಚು ಜನರ ಮೇಲೆ ಕೇಸು ದಾಖಲಿಸಿರುವುದನ್ನು ಗಮನಿಸಿದರೆ ಪೊಲೀಸರ ತಾರತಮ್ಯ ನೀತಿ ಸ್ಪಷ್ಟವಾಗುತ್ತದೆ. ಅಲ್ಲದೇ ಪೋಲಿಸ್ ಇಲಾಖೆಯು ಒಂದು ಸಮುದಾಯಕ್ಕೆ ಪರೋಕ್ಷವಾಗಿ ಸಾಥ್ ನೀಡುತ್ತಿರುವುದು ಎದ್ದು ಕಾಣುತ್ತಿದೆ ಎಂದು ಅವರು ಟೀಕಿಸಿದ್ದಾರೆ.
ಶಾಂತಿಯನ್ನು ಕದಡಲು ಪ್ರಯತ್ನಿಸುತ್ತಿರುವವರ ವಿರುದ್ಧ ಪೊಲೀಸ್ ಇಲಾಖೆ ಕ್ರಮಕ್ಕೆ ಮುಂದಾಗದಿದ್ದರೆ, ಮುಂದಾಗುವ ಎಲ್ಲಾ ಅನಾಹುತಗಳಿಗೆ ಪೊಲೀಸ್ ಇಲಾಖೆ ಮತ್ತು ಜಿಲ್ಲಾಡಳಿತವೇ ನೇರ ಹೊಣೆಯಾಗಿರುತ್ತದೆ. ಈ ರೀತಿಯ ತಾರತಮ್ಯ ನೀತಿಯ ಮೂಲಕ ಇಲಾಖೆಯ ಮೇಲೆ ಜನರು ನಂಬಿಕೆ ಕಳೆದುಕೊಳ್ಳುವ ಮುನ್ನ ಇಲಾಖೆ ಎಚ್ಚೆತ್ತುಕೊಳ್ಳಬೇಕು. ಜಾಥಕ್ಕೆ ಕರೆಕೊಟ್ಟವರ ವಿರುದ್ದ ತಕ್ಷಣವೇ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಅವರು ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.







