ಕರ್ನಾಟಕದಲ್ಲಿ 'ಶಿಕ್ಷಣ ಮಾಫಿಯಾ' ಬಗ್ಗೆ ಕಳವಳ ವ್ಯಕ್ತಪಡಿಸಿದ ಸುಪ್ರೀಂ ಕೋರ್ಟ್ ನ್ಯಾಯಾಧೀಶ ಅಬ್ದುಲ್ ನಝೀರ್

Photo: ANI
ಹೊಸದಿಲ್ಲಿ: ಕರ್ನಾಟಕದಲ್ಲಿರುವ 'ಶಿಕ್ಷಣ ಮಾಫಿಯಾ' ವೈದ್ಯಕೀಯ ಸೇರಿದಂತೆ ವೃತ್ತಿಪರ ಕೋರ್ಸುಗಳ ಪ್ರವೇಶಾತಿ ವೇಳೆ ಬೀರುತ್ತಿರುವ ಪ್ರಭಾವದ ಕುರಿತಂತೆ ಕರ್ನಾಟಕ ಮೂಲದ ಸುಪ್ರೀಂ ಕೋರ್ಟ್ ನ್ಯಾಯಾಧೀಶ ಜಸ್ಟಿಸ್ ಎಸ್ ಅಬ್ದುಲ್ ನಜೀಲ್ ಗುರುವಾರ ಕೋರ್ಟ್ ಕಲಾಪದ ವೇಳೆ ತಮ್ಮ ಆತಂಕ ತೋಡಿಕೊಂಡು.
"ರಾಜ್ಯದಲ್ಲಿ ಎನ್ಆರ್ಐ ಸೀಟುಗಳನ್ನು 'ಸಿಂಡಿಕೇಟ್' ಒಂದು ವಸ್ತುಶಃ ಹರಾಜು ಹಾಕುತ್ತಿದೆ, ಈ ಮಾಫಿಯಾದ ಪ್ರಭಾವದಿಂದ ಹಣದ ಥೈಲಿಯಿರುವವರು ಹಾಗೂ ಕಡಿಮೆ ಅರ್ಹತೆ ಹೊಂದಿರುವವರು ಸೀಟು ಪಡೆಯುವಂತಾಗಿದೆ" ಎಂದು ಅವರು ಹೇಳಿದರು.
ನೀಟ್-(ಯುಜಿ) ಗಾಗಿ ಓವರ್ಸೀಸ್ ಸಿಟಿಜನ್ಶಿಪ್ ಕಾರ್ಡ್ ಹೊಂದಿರುವವರನ್ನು ಎನ್ಆರ್ಐಗಳಂತೆಯೇ ಪರಿಗಣಿಸುವ ಗೃಹ ಸಚಿವಾಲಯದ ಅಧಿಸೂಚನೆಯನ್ನು ಪ್ರಶ್ನಿಸಿ ಓವರ್ಸೀಸ್ ಸಿಟಿಜನ್ಶಿಪ್ ಆಪ್ ಇಂಡಿಯಾ ಕಾರ್ಡ್ ಹೊಂದಿರುವವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಜಸ್ಟಿಸ್ ನಜೀರ್ ಮೇಲಿನಂತೆ ಹೇಳಿದರು.
"ಎನ್ಆರ್ಐ ಸೀಟುಗಳಿಗೆ ರೂ 2 ಕೋಟಿಯಿಂದ ರೂ 3 ಕೋಟಿ ತನಕ ನೀಡಬೇಕಿದೆ" ಎಂದು ವಿಚಾರಣೆ ವೇಳೆ ವಕೀಲರೊಬ್ಬರು ಹೇಳಿದಾಗ ಪ್ರತಿಕ್ರಿಯಿಸಿದ ಜಸ್ಟಿಸ್ ನಜೀರ್, ಕರ್ನಾಟಕದಲ್ಲಿ ಅದಕ್ಕಿಂತ ಹೆಚ್ಚು ದರ ಇದೆ ಎಂದರು. "ಅವರು ವಸ್ತುಶಃ ಎನ್ಆರ್ ಐ ಸೀಟುಗಳನ್ನು ಹರಾಜು ಹಾಕುತ್ತಾರೆ. ಅಲ್ಲಿ ವಕೀಲನಾಗಿ ನನ್ನ ಅನುಭವಗಳಿಂದ ತಿಳಿದಂತೆ, ಅಲ್ಲೊಂದು ಸಿಂಡಿಕೇಟ್ ಇದೆ, ಅದನ್ನು ಶಿಕ್ಷಣ ಮಾಫಿಯಾ ಎನ್ನಲಾಗುತ್ತದೆ, ಕರ್ನಾಟಕದಲ್ಲಿ ಗರಿಷ್ಠ ವೈದ್ಯಕೀಯ ಸೀಟುಗಳಿವೆ" ಎಂದು ಹೇಳಿದರು.







