ಕಾಂಗ್ರೆಸ್‍ನಲ್ಲಿರುವುದು ಆಂತರಿಕ ಪ್ರಜಾಪ್ರಭುತ್ವವಲ್ಲ, ವಂಶಪಾರಂಪರ್ಯ: ಸಿ.ಟಿ.ರವಿ
'ಕನ್ಹಯ್ಯ ಕುಮಾರ್ ತುಕ್ಡೆ ಗ್ಯಾಂಗಿನ ನಾಯಕ'

ಚಿಕ್ಕಮಗಳೂರು, ಅ.3: ಕಾಂಗ್ರೆಸ್ ಆಂತರಿಕ ಪ್ರಜಾಪ್ರಭುತ್ವವಿಲ್ಲದ ಪಕ್ಷವಾಗಿದ್ದು, ದೇಶಕ್ಕೇನು ಪ್ರಜಾಪ್ರಭುತ್ವದ ಪಾಠ ಹೇಳುತ್ತೇ, ಕಾಂಗ್ರೆಸ್‍ನಲ್ಲಿ ಆಂತರಿಕ ಪ್ರಜಾಪ್ರಭುತ್ವ ಎಲ್ಲಿದೆ? ಅಲ್ಲಿರೋದು ವಂಶ ಪಾರಂಪರ್ಯ ಮಾತ್ರ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕ ಸಿ.ಟಿ.ರವಿ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಇತ್ತೀಚೆಗೆ ಸಿಪಿಐ ಪಕ್ಷ ತೊರೆದು ಕಾಂಗ್ರೆಸ್ ಸೇರಿದ ಸಂದರ್ಭದಲ್ಲಿ ಬಿಜೆಪಿ ಸೋಲಿಸಲು ಕಾಂಗ್ರೆಸ್‍ನಿಂದ ಮಾತ್ರ ಸಾಧ್ಯ ಎಂದು ಕನ್ಹಯ್ಯ ಕುಮಾರ್ ಹೇಳಿಕೆಗೆ ತಿರುಗೇಟು ನೀಡಿದ ಅವರು, ಬಿಜೆಪಿ ಪಕ್ಷವನ್ನು ತುಕ್ಡೆ ತುಕ್ಡೆ ಮಾಡುತ್ತೇವೆ ಎಂದು ಹೇಳಿದವರು ಕಳೆದು ಹೋಗಿದ್ದಾರೆ. ಸಂಘ ಮತ್ತು ಬಿಜೆಪಿ ಬಲಿಷ್ಟವಾಗಿದೆ ಎಂದು ಹೇಳಿದರು.
'ಕನ್ಹಯ್ಯನಂತವರ ತಾತ ಮುತ್ತಾತರು ಈ ರೀತಿ ಹೇಳಿ ಕಳೆದು ಹೋಗಿದ್ದಾರೆ. ಅವರ ಸಮಾದಿಯ ಮಣ್ಣಿನ ಮೇಲೆ ಸಂಘಪರಿವಾರ, ಬಿಜೆಪಿ ಬಲವಾಗಿದೆ. ಕನ್ನಯ್ಯಮಾರ್ ತುಕ್ಡೆ ಗ್ಯಾಂಗಿನ ನಾಯಕ, ಹಿಟ್ಟು ಹಳಿಸಿತ್ತು, ಡ್ಯಾಶ್ ಕಾದಿತ್ತು ಅನ್ನೋ ಗಾದೆ ಮಾತಿನಂತೆ ಈಗ ಅದೇ ಪರಿಸ್ಥಿತಿ ಕಾಂಗ್ರೆಸ್‍ಗೆ ಬಂದೊದಗಿದೆ' ಎಂದರು.
'ಪರಿವಾರದಿಂದ ಬಂದರೆ ಅಲ್ಲಿ ಮಾಲಕತ್ವ ಬರುತ್ತೇ ಅಲ್ಲಿ ಮಾಲಕರು ನೌಕರರು, ಮಾಲಕರು ಗುಲಾಮರಾಗಿರುತ್ತಾರೆ. ತುಕ್ಡೆ ಗ್ಯಾಂಗಿನ ನಾಯಕರಿಗೆ ಗತಿ ಇರಲಿಲ್ಲ, ಚುನಾವಣೆಯಲ್ಲಿ ಸೋತ ಇಂತವರು ಬಹಳ ಮಾತನಾಡಿ ಮಣ್ಣಾಗಿದ್ದಾರೆ' ಎಂದರು.







