ತುಳು ಭಾಷಾ ವಾಚಿಯಲ್ಲ; ಪ್ರದೇಶ ವಾಚಿ: ಪುಂಡಿಕಾ ಗಣಪಯ್ಯ ಭಟ್

ಉಡುಪಿ, ಅ.2: ತುಳು ಎಂಬುದು ಭಾಷಾ ವಾಚಿಯಲ್ಲ. ಅದು ದೇಶ ವಾಚಿ ಅಥವಾ ಪ್ರದೇಶ ವಾಚಿ. ತುಳು ನಾಡಿನಲ್ಲಿ ಜನರಾಡುವ ಭಾಷೆ ತುಳುವೆಂದು ಕರೆಸಿಕೊಂಡಿತು ಎಂದು ಖ್ಯಾತ ಇತಿಹಾಸಜ್ಞ ಹಾಗೂ ಮೂಡಬಿದರೆ ಶ್ರೀಧವಳಾ ಕಾಲೇಜಿನ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಭಾಗದ ನಿವೃತ್ತ ಮುಖ್ಯಸ್ಥ ಡಾ.ಪುಂಡಿಕಾ ಗಣಪಯ್ಯ ಭಟ್ ಹೇಳಿದ್ದಾರೆ.
ತುಳು ದಿನಾಚರಣೆಯ ಅಂಗವಾಗಿ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್ (ಮಾಹೆ), ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ಆಶ್ರಯದಲ್ಲಿ ಎಂಜಿಎಂ ಕಾಲೇಜಿನ ಆವರಣದಲ್ಲಿರುವ ಧ್ವನ್ಯಾಲೋಕ ದಲ್ಲಿ ಶನಿವಾರ ನಡೆದ ‘ತುಳು ದಿನಾಚರಣೆ’ಯಲ್ಲಿ ತುಳು, ತುಳುನಾಡು, ತುಳು ನುಡಿ-ಒಂದು ಹಿನ್ನೋಟ ವಿಷಯದ ಕುರಿತು ಉಪನ್ಯಾಸ ನೀಡುತಿದ್ದರು.
ತುಳು ಎಂದರೆ ನೀರಿಗೆ ಸಂಬಂಧಪಟ್ಟದ್ದು ಎಂದು ಭಾಷಾ ವಿದ್ವಾಂಸರು, ಸಂಶೋಧಕರು ಹೇಳುತ್ತಾರೆ. ಜಲಾಧಾರಿತ ಪ್ರದೇಶವಾದ ಕಾರಣ ಇದಕ್ಕೆ ತುಳು ನಾಡು ಎಂದು ಹೆಸರು ಬಂದಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಇದಕ್ಕಿಂತ ಸಮರ್ಥವಾದ ವಾದ ಬರುವವರೆಗೆ ನಾವು ಇದನ್ನೇ ಸರಿ ಎಂದು ನಂಬಬಹುದು ಎಂದು ಡಾ.ಭಟ್ ಹೇಳಿದರು.
ಎಲ್ಲಿಯೂ ತುಳು ಭಾಷಾ ವಾಚಿಯಾಗಿ ಕಂಡುಬರುವುದಿಲ್ಲ. ದಾಖಲೆಗಳಲ್ಲಿ ಅದು ದೇಶ ವಾಚಿ ಅಥವಾ ಪ್ರದೇಶ ವಾಚಿಯಾಗಿಯೇ ಕಂಡುಬರುತ್ತದೆ. ತುಳು ನಾಡಿನಲ್ಲಿ ಜನರು ಆಡುವ ಭಾಷೆಗೆ ತುಳು ಎಂದು ಹೆಸರು ಬಂತು ಎಂದು ಅವರು ಸೇಡಿಯಾಪುರಂಥ ವಿದ್ವಾಂಸರು, ಡಾ.ಕೆ.ವಿ.ರಮೇಶ್‌ರಂಥ ಇತಿಹಾಸಜ್ಞರ ಹೇಳಿಕೆಗಳನ್ನು ಉಲ್ಲೇಖಿಸಿ ನುಡಿದರು.
ತಮಿಳಿನಲ್ಲಿ ಮೊದಲ ತುಳು ಉಲ್ಲೇಖ: ತುಳು ಅಥವಾ ತುಳುನಾಡಿನ ಉಲ್ಲೇಖ ಮೊತ್ತಮೊದಲಿಗೆ ನಮಗೆ ಕಂಡುಬರುವುದು ಕ್ರಿ.ಶ.2-3ನೇ ಶತಮಾನದ ತಮಿಳುನಾಡಿನ ಸಂಗಂ ಸಾಹಿತ್ಯದಲ್ಲಿ. ಅದರಲ್ಲಿ ಪ್ರಥಮವಾಗಿ ತುಳುನಾಡಿನ ಉಲ್ಲೇಖ ಕಂಡುಬರುತ್ತದೆ. ಹೀಗಾಗಿ ತುಳುವಿಗೆ ಸುಮಾರು ಎರಡು ಶತಮಾನಗಳ ಇತಿಹಾಸವಿದೆ ಎಂದು ನಂಬಬಹುದು ಎಂದರು.
ಸುಮಾರು 1800 ವರ್ಷಗಳ ಹಿಂದಿನ ತಮಿಳುನಾಡಿನ ಸಂಗಂ ಸಾಹಿತ್ಯದಲ್ಲಿ ತುಳುನಾಟ್‌ನ ಉಲ್ಲೇಖವಿದ್ದು, ಅಲ್ಲಿ ಕೋಶದ್ ಜನಾಂಗ ವಾಸಮಾಡುತ್ತಿತ್ತು ಎಂದು ಹೇಳಲಾಗಿದೆ. ಕೋಶದ್ ಜನಾಂಗ ಕಪ್ಪು ಕಣ್ಣು ಹೊಂದಿದ್ದು, ನವಿಲುಗರಿಯಂಥ ಬಾಣ ಹೊಂದಿದ ಬಿಲ್ಲುಗಾರರು. ದೂರದೇಶಗಳಲ್ಲಿ ಖ್ಯಾತಿ ಹೊಂದಿದವರು.ಚಿನ್ನ ಧರಿಸುತಿದ್ದರು, ರಥದಲ್ಲಿ ಓಡಾಡುತಿದ್ದರು ಎಂದು ಇದರಲ್ಲಿ ಉಲ್ಲೇಖವಿದೆ ಎಂದವರು ವಿವರಿಸಿದರು.
ನಾಲ್ಕು ನಾಲಗೆ ಜನಾಂಗ: ಕೋಶದ್ ಜನಾಂಗ ಸತ್ಯಸಂಧರು, ಮಾತಿಗೆ ತಪ್ಪದವರು. ಹೀಗಾಗಿ ದೂರದೇಶಗಳಲ್ಲೂ ಪ್ರಖ್ಯಾತರಾಗಿದ್ದರು ಎಂದು ಹೇಳಲಾಗುತ್ತದೆ. ಆದರೆ ಈ ಕೋಶದ್ ಜನಾಂಗ ಅಂದರೆ ಯಾರು ಎಂಬುದರ ಬಗ್ಗೆ ಹೆಚ್ಚಿನ ಉಲ್ಲೇಖವಿಲ್ಲ. ಅವರು ಯಾರೂ ಎಂಬುದು ಇನ್ನೂ ಸ್ಪಷ್ಟವಾಗಿ ಗೊತ್ತಾಗಿಲ್ಲ. ಕೊರಗರೇ ಎಂಬ ಬಗ್ಗೆ ಜಿಜ್ಞಾಸೆ ಇದೆ. ಇವರನ್ನು ನಾಲ್ಕು ನಾಲಗೆಯ ಜನಾಂಗ ಎಂದು ಕರೆಯಲಾಗುತ್ತದೆ. ಅಂದರೆ ಇವರು ನಾಲ್ಕು ಭಾಷೆ ಮಾತನಾಡಬಲ್ಲರು ಎಂದು. ಇವರಾಡುವ ಮಾತು ತುಳು-ಕನ್ನಡ- ತಮಿಳು- ತೆಲುಗು ಎಂದು ಡಾ.ಕೆ.ವಿ.ರಮೇಶ್ ಹೇಳಿದರೆ, ಎಸ್.ಶೆಟ್ಟರ್ ಅವರು ತುಳು-ಕನ್ನಡ- ತಮಿಳು-ಕೊಡವ ಎನ್ನುತ್ತಾರೆ. ಒಟ್ಟಿನಲ್ಲಿ ಇತಿಹಾಸದ ದಾಖಲೆಗಳ ಪ್ರಕಾರ ಪಂಚದ್ರಾವಿಡ ಭಾಷೆಗಳಲ್ಲಿ ಒಂದಾದ ತುಳು 2000 ವರ್ಷಗಳಷ್ಟು ಪುರಾತನವಾದುದು ಎಂದು ಖಚಿತವಾಗಿ ಹೇಳಬಹುದು.
ಶಾಸನಗಳಲ್ಲಿ ತುಳು: ಶಾಸನಗಳಲ್ಲಿ ತುಳುವಿನ ಪ್ರಥಮ ಉಲ್ಲೇಖ ಕಂಡುಬರುವುದು ಸಹ ತಮಿಳುನಾಡಿನ ಶಾಸನಗಳಲ್ಲಿ. 8ನೇ ಶತಮಾನದಲ್ಲಿ ಪಲ್ಲವ ದೊರೆ ಇಮ್ಮಡಿ ನಂದಿವರ್ಮನ 792ರ ಪಟ್ಟಮಂಗಲಂನ ತಾಮ್ರ ಶಾಸನದಲ್ಲಿ ತಮಿಳು ಮತ್ತು ಸಂಸ್ಕೃತ ಭಾಷೆಯಲ್ಲಿ ತುಳುವಿನ ಉಲ್ಲೇಖ ಬರುತ್ತದೆ. ನಂದಿವರ್ಮನ ದರ್ಶನಕ್ಕೆ ಹೆಬ್ಬಾಗಿಲಿನಲ್ಲಿ ಸಾಲುಗಟ್ಟಿ ನಿಂತ ಅರಸರಲ್ಲಿ ತುಳು ಅರಸು ಸಹ ಸೇರಿದ್ದಾರೆ ಎಂದು ಉಲ್ಲೇಖಿತವಾಗಿದೆ. ಹೀಗೆ ಶಾಸನದಲ್ಲಿ ತುಳು ಪದ ಪ್ರಥಮ ಕಂಡುಬಂದಿರುವುದು ಕ್ರಿ.ಶ.792ರಲ್ಲಿ.
ಕನ್ನಡ ಶಾಸನದಲ್ಲಿ: ಕನ್ನಡ ಶಾಸನಗಳನ್ನು ಗಮನಿಸಿದ ತುಳುವಿನ ಪ್ರಥಮ ಉಲ್ಲೇಖ ಕಂಡುಬರುವುದು ಚೋಳದ ರಾಜರಾಜನ ಶಾಸನದಲ್ಲಿ. ಶ್ರೀರಂಗ ಪಟ್ಟಣ ಸಮೀಪದ ಬಲಮುರಿಯಲ್ಲಿ ಸಿಕ್ಕಿರುವ ಕನ್ನಡ ಶಾಸನದಲ್ಲಿ ತುಳುವಿನ ಉಲ್ಲೇಖವಿದೆ. ರಾಜರಾಜನ ಮಗ ಪಂಚವಮಹಾರಾಯ ಗೆದ್ದ ರಾಜ್ಯಗಳಲ್ಲಿ ತುಳು ಅರಸರನ್ನು ಸೋಲಿಸಿದ ಉಲ್ಲೇಖ 1012ರ ಈ ಶಾಸನದಲ್ಲಿ ಸಿಗುತ್ತದೆ.
ಕರಾವಳಿಯ ಶಾಸನಗಳಲ್ಲಿ ತುಳುವಿನ ಉಲ್ಲೇಖ 11ನೇ ಶತಮಾನ ಆದಿಭಾಗದಲ್ಲಿ ಬಾರಕೂರಿನ ಶಾಸನದಲ್ಲಿ ಸಿಗುತ್ತದೆ. ಬಾರಕೂರಿನಲ್ಲಿ ಆಳುತಿದ್ದ 1ನೇ ಬಂಕಿದೇವನು ಶಾಂತರ ಸಹಾಯದಿಂದ ಆಕ್ರಮಣಕ್ಕೆ ಬಂದ ಚೋಳರನ್ನು ಹೊಡೆದೊಡಿಸಿ ಆಡಳಿತ ನಡೆಸಿದ ಎಂದು ಉಲ್ಲೇಖವಾಗಿದೆ. ಆದರೆ ತುಳುನಾ ಡನ್ನು ದಾಖಲೆಯ 900 ವರ್ಷಗಳ ಕಾಲ ಆಳಿದ ಅಳುಪರ ಸಮಯದ ಶಾಸನದಲ್ಲಿ ತುಳುವಿನ ಉಲ್ಲೇಖ ಕಡಿಮೆ. ಆದರೆ ಹೊರಗಿನವರ ವಿಜಯನಗರ, ಹೊಯ್ಸಳ ಮುಂತಾದವರ ಶಾಸನಗಳಲ್ಲಿ ತುಳು-ತುಳುರಾಜ್ಯದ ಉಲ್ಲೇಖವಿದೆ ಎಂದು ಡಾ.ಗಣಪಯ್ಯ ಭಟ್ ವಿವರಿಸಿದರು.
ತುಳುನಾಡಿನ ವ್ಯಾಪ್ತಿಯ ಬಗ್ಗೆ ಸಾಕಷ್ಟು ಗೊಂದಲ ಉಳಿದುಕೊಂಡಿದೆ. 400 ವರ್ಷ ತುಳುವರ ರಾಜಧಾನಿಯಾಗಿದ್ದ ಬಾರಕೂರು ತುಳುಭಾಷಿಗರ ನಾಡಲ್ಲ. ಆದರೂ ಉತ್ತರದ ಬೈಂದೂರಿನಿಂದ ದಕ್ಷಿಣದ ಚಂದ್ರಗಿರಿ ನದಿಯವರೆಗಿನ ಪ್ರದೇಶವನ್ನು ತುಳುನಾಡು ಎಂದು ಪರಿಗಣಿಸಲಾಗುತ್ತದೆ. ಇಲ್ಲಿನ ಸಂಸ್ಕೃತಿ, ಆಚರಣೆ, ಅರಾಧನೆ, ಉಡುಗೆ-ತೊಡುಗೆ ಸಮಾನತೆಯ ಆಧಾರದಲ್ಲಿ ಇದನ್ನು ನಿರ್ಧರಿಸಲಾಗಿದೆ ಎಂದರು.
ನಶಿಸದ ತುಳು ಸಂಸ್ಕೃತಿ: ತುಳುನಾಡನ್ನು 900 ವರ್ಷಗಳ ಕಾಲ ಅಳುಪರ ಒಂದೇ ಮನೆತನ ಆಳ್ವಿಕೆ ನಡೆಸಿದ ಕಾರಣ, ಅಳುಪರ ಅವನತಿಯ ಬಳಿಕವೂ (ಸುಮಾರು 1350ರ ನಂತರ) ದಾಳಿ ನಡೆಸಿದ ವಿಜಯನಗರ, ಹೊಯ್ಸಳರು ತಾವೇ ಆಳ್ವಿಕೆ ನಡೆಸದೇ, 14 ಸ್ಥಳೀಯ ಅರಸರ ಮನೆತನ (ಸಾಮಂತರು) ಮೂಲಕ ಆಳ್ವಿಕೆ ನಡೆಸಿದ ಕಾರಣ, ತುಳುನಾಡಿನ ಸಂಸ್ಕೃತಿ, ಭಾಷೆ ಈಗಲೂ ಉಳಿದುಕೊಂಡು ಬಂದಿದೆ ಎಂದು ಡಾ.ಗಣಪಯ್ಯ ಭಟ್ ನುಡಿದರು.
ಹಾಸನ ಜಿಲ್ಲೆ ಹಲ್ಮಿಡಿಯಲ್ಲಿ ಪತ್ತೆಯಾದ ಕ್ರಿ.ಶ. 450ನೇ ಇಸವಿಗೆ ಸೇರಿದ ಮೊತ್ತ ಮೊದಲ ಕನ್ನಡ ಶಾಸನದಲ್ಲಿ ಅಳುಪರ ಉಲ್ಲೇಖ ಬರುತ್ತದೆ. ಹೀಗಾಗಿ 450ರಿಂದ 1350ರವರೆಗೆ ಅಂದರೆ 900 ವರ್ಷ ಅಳುಪ ಮನೆತನ ತುಳುನಾಡನ್ನು ನಿರಂತರವಾಗಿ ಆಳ್ವಿಕೆ ನಡೆಸಿದೆ. ಆಳಿದ ಅಳುಪ ಅರಸರಲ್ಲಿ 30 ಮಂದಿಗಿಂತ ಹೆಚ್ಚು ಅರಸರ ಉಲ್ಲೇಖ ಸಿಗುತ್ತದೆ. ಇವರು ಯಾರ ಸ್ವಾಧೀನ ದಲ್ಲೂ ಇರದೇ ಸ್ವತಂತ್ರರಾಗಿ ಆಳ್ವಿಕೆ ನಡೆಸಿರುವುದು ಹೆಮ್ಮೆಯ ವಿಷಯವಾಗಿದೆ ಎಂದರು.
1350ರ ಬಳಿಕ ಅಳುಪರ ಅವನತಿ ಪ್ರಾರಂಭವಾಗಿ ವಿಜಯನಗರ ಅರಸರ ಪಾಲಾಗುತ್ತದೆ. ಹೀಗಾಗಿ ವಿಜಯನಗರ ಅರಸರ ಅತಿಹೆಚ್ಚು ಶಾಸನ ಪತ್ತೆಯಾಗಿ ರುವುದು (ಒಟ್ಟು 307) ತುಳುನಾಡಿನಲ್ಲಿ ಎಂಬುದು ವಿಶೇಷ. ಅಳುಪರೊಂದಿಗೆ ಸುಮಾರು 400ರಷ್ಟು ಸ್ಥಳೀಯ ಅರಸರು ಇಲ್ಲಿ ಆಡಳಿತ ನಡೆಸದೇ ಇದ್ದರೆ ತುಳು ಸಂಸ್ಕೃತಿ ಉಳಿಯುತ್ತಿರಲಿಲ್ಲ ಎಂದು ಅವರು ಅಭಿಪ್ರಾಯಪಟ್ಟರು.
ಭಾಷೆ-ಲಿಪಿ: ತುಳು ಪಂಚದ್ರಾವಿಡ ಭಾಷೆಗಳಲ್ಲಿ ಅತ್ಯಂತ ಹಳೆಯ ಭಾಷೆ ಯಾದರೂ, ಉಳಿದ ಭಾಷೆಗಳಿಗೆ ಸಿಕ್ಕ ಗೌರವ ಸಿಕ್ಕಿಲ್ಲ. ಇದಕ್ಕೆ ಐತಿಹಾಸಿಕ ಕಾರಣಗಳಿವೆ. ಆರಂಭದಲ್ಲಿ ಇದಕ್ಕೆ ರಾಜಾಶ್ರಯವಿರಲಿಲ್ಲ. ತುಳುನಾಡಿನಲ್ಲಿ ಸಿಕ್ಕಿದ ಸುಮಾರು 2000 ಶಾಸನಗಳಲ್ಲಿ ತುಳು ಹಾಗೂ ತುಳುವಿಗೆ ಸಂಬಂಧಿಸಿದ್ದು ಸುಮಾರು 40ಮಾತ್ರ. ತುಳು ಭಾಷೆಗೆ ಸಂಬಂಧಿಸಿ 25, ತುಳು ಲಿಪಿಯಲ್ಲಿ ಕನ್ನಡ ಶಾಸನ 7-8, ತುಳು ಲಿಪಿಯಲ್ಲಿ ಸಂಸ್ಕೃತ ಶಾಸಕ 6-7 ಮಾತ್ರ. ಈ ಶಾಸನಗಳೂ ಐತಿಹಾಸಿಕ ಮಹತ್ವ ಹೊಂದಿಲ್ಲ. ಹೀಗಾಗಿ ಅಂದೂ ತುಳು ಭಾಷೆ ಜನರ ಭಾಷೆಯಾಗಿದ್ದರೂ ಕನ್ನಡವೇ ವ್ಯವಹಾರ ಭಾಷೆಯಾಗಿತ್ತು ಎಂಬುದು ಗೊತ್ತಾಗುತ್ತದೆ. ತುಳು ಭಾಷಿಕ ರಾಜಮನೆತನಗಳಲ್ಲೂ ತುಳುವಿಗೆ ಗೌರವ ಸಿಕ್ಕಿರಲಿಲ್ಲ ಎಂದರು.
2011ರ ಜನಗಣತಿ ಪ್ರಕಾರ ಅವಿಭಜಿತ ಜಿಲ್ಲೆಯಲ್ಲಿ 18.5 ಲಕ್ಷ ತುಳು ಭಾಷಿಕರಿದ್ದಾರೆ. ಹೀಗಾಗಿ ಸರಕಾರಿ ಮಟ್ಟದಲ್ಲಿ ಆಡಳಿತದಿಂದ ನಿರೀಕ್ಷಿತ ಗೌರವದಿಂದ ವಂಚಿತರಾಗಿದ್ದೇವೆ. ಇದರೊಂದಿಗೆ ಲಿಪಿ ಬಗ್ಗೆ ಗೊಂದಲ ಈಗಲೂ ಮುಂದುವರಿದಿದೆ. ಇದರಿಂದ ಬರಹ ಹಾಗೂ ಸಾಹಿತ್ಯ ಭಾಷೆ ಯಾಗಿ ಅದು ಬೆಳೆಯಲಿಲ್ಲ ಎಂದು ಡಾ.ಭಟ್ ಅಭಿಪ್ರಾಯಪಟ್ಟರು.
ತುಳುವಿಗೆ ನಮ್ಮ ರಾಜ್ಯದಲ್ಲೇ ಅಧಿಕೃತ ಭಾಷೆಯಾಗಿ ಮಾನ್ಯತೆ ಸಿಕ್ಕಿಲ್ಲ. ಇನ್ನು ಸಂವಿಧಾನದ 8ನೇ ಪರಿಚ್ಚೇದಕ್ಕೆ ಸೇರುವ ಬಗ್ಗೆ ಪ್ರಯತ್ನ ಇನ್ನೂ ನಡೆಯುತ್ತಿದೆ. 19ನೇ ಶತಮಾನದಲ್ಲಿ ಮಂಗಳೂರಿಗೆ ಬಂದ ಬಾಸೆಲ್ ಮಿಷನ್‌ನವರು ಕನ್ನಡ ಅಕ್ಷರಗಳಲ್ಲಿ ತುಳುವನ್ನು ಜನಪ್ರಿಯ ಗೊಳಿಸಿದ ಕಾರಣ ಇಂದು ತುಳು ಉಳಿಯಲು ಸಾಧ್ಯವಾಗಿದೆ.
ತುಳು ಭಾಷೆಯ ಬಗ್ಗೆ ಇತ್ತೀಚೆಗೆ ಜನರಲ್ಲಿ ಮೂಡಿದ ಜಾಗೃತಿ ನೋಡಿದಾಗ ತುಳುವಿಗೆ ಅಳಿವಿನ ಅಪಾಯ ಖಂಡಿತ ಇಲ್ಲ.ತುಳು ಖಂಡಿತ ಅಭಿವೃದ್ಧಿ ಹೊಂದುತ್ತದೆ. ಮಾತನಾಡುವವರ ಸಂಖ್ಯೆ ಹೆಚ್ಚಿದೆ. ಇದು ನಿರಂತರವಾಗಿರ ಬೇಕು ಎಂದು ಡಾ.ಗಣಪಯ್ಯ ಭಟ್ ಆಶಿಸಿದರು.
ತುಳುಕೂಟ ಉಡುಪಿಯ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಅಧ್ಯಕ್ಷತೆ ವಹಿಸಿದರು. ಕೇಂದ್ರದ ಆಡಳಿತಾಧಿಕಾರಿ ಡಾ.ಬಿ.ಜಗದೀಶ್ ಶೆಟ್ಟಿ ಅತಿಥಿಗಳನ್ನು ಸ್ವಾಗತಿಸಿದರು.







